Monday, 29 December 2014

ಕೆಲವು ವಯಸ್ಸಾದ ಗಂಡ ಹೆಂಡಂದಿರು
ಮಾಡಲು ಬೇರೇನೂ ಕೆಲಸವಿಲ್ಲದೆ,
ತಮ್ಮ ತಮ್ಮಲ್ಲೇ ಜಗಳ ಆಡುವುದನ್ನೇ
ಮುಖ್ಯ ಕಾಯಕ ಮಾಡಿಕೊಂಡಿರುತ್ತಾರೆ.
***ದಾರ್ಶನಿಕ
ಸಂಭಾಷಣೆ.


ಕೆಲವು ಸಿನೆಮಾ ಮತ್ತು ಸೀರಿಯಲ್ dialogue writers ಬರೆಯುವ ಸಂಭಾಷಣೆಗಳು ಒಂಥರಾ ಮಜವಾಗಿಯೂ, witty ಆಗಿಯೂ ಇರುತ್ತವೆ. ಹಾಗೇ ಕಿವಿಯ ಮೇಲೆ ಬಿದ್ದ (ಯಾಕಂದರೆ ನಾನು ಸೀರಿಯಲ್ಸ್ ಹೆಚ್ಚು ನೋಡೋಲ್ಲ) ಒಂದು ಕನ್ನಡ ಸೀರಿಯಲ್ dialogue ತುಣುಕು ಹೀಗಿದೆ ನೋಡಿ...
"ಕಲ್ಲು ಯಾರೋ ಹೊಡೆಯುತ್ತಾರೆ, ಹೊಡೆಯಲಿ.
ಹಣ್ಣು ಬಿದ್ದರೆ ಆರಿಸಿ ಕೊಳ್ಳೋಣ. ಏಟು ಬೀಳುವ ಹಾಗಿದ್ದರೆ, ತಪ್ಪಿಸಿ ಕೊಳ್ಳೋಣ, ಬೇಗ ಬಾ......"
ಹೇಗಿದೆ?

28.12.2014

Sunday, 28 December 2014

ಸಂಬಂಧಗಳು ಬಹಳ ಅತಿರೇಕವಾಗಿ
ಹತ್ತಿರವಾಗಿರ ಬಾರದು.
ಸ್ನೇಹವೂ ಇರಬೇಕು, ಆದರೆ,
"ದೂರತೋ ಪರ್ವತೋ ರಮ್ಯ"
ಅನ್ನುವ ಹಾಗೆ ಅದು ಎಷ್ಟು ಬೇಕೋ
ಅಷ್ಟರಲ್ಲೇ ಇದ್ದರೆ, ಮುಂದೆ ಆ
ಸಂಬಂಧಗಳು ಕಹಿಯಾಗುವ ಸಾಧ್ಯತೆ ಕಡಿಮೆ.
*****ದಾರ್ಶನಿಕ.
ಮನೆಯ ದನ ಎಷ್ಟೇ
ಹಾಲು ಕೊಟ್ಟರೂ,
ಮನೆಯೊಡತಿಯ
ಮನ ಸರಿ ಇಲ್ಲದಿದ್ದರೆ,
ಎಲ್ಲರಿಗೂ ನೀರು ಹಾಲೇ ಗತಿ
.
**ದಾರ್ಶನಿಕ
ನಿಂತ ನೀರು - ನಿಂತ ದೋಣಿ
++++++
ಮಧ್ಯೆ ನಿಂತ ದೋಣಿ,
ಬಗೆ ಹರಿಯದೇನೋ
ಎನ್ನುವ ಚಿಂತೆ,
ಹರಿವೂ ಇಲ್ಲ, ಸುಳಿಯೂ ಇಲ್ಲ,
ಸ್ಥಿರವಾಗಿ ನಿಂತ ನೀರು,
ದಡ ಸೇರಿಸಲು ಗಾಳಿಯೂ ಇಲ್ಲ,
ಎಂದು ಬಂದಾನು ನನ್ನ ನಲ್ಲ,
ಕೈ ನೀಡಿ ನನಗಾಸರೆಯಾಗಲು
ಕಾಯುತಿಹೆ, ಕಾಯುತಿಹೆ,
ನಾ ಅತಿ ದುಗುಡದಲ್ಲಿ.
28.12.2014

Friday, 26 December 2014

ನಗೆ-ಹೊನಲು!

ಒಂದು ಪಾರ್ಟಿಯಲ್ಲಿ ಒಬ್ಬ ಮಾಹಶಯ ತನ್ನ ಪಕ್ಕದವರ ಬಳಿ
ಹೇಳಿದ " ಏನು ಕಾಲ ಬಂತಪ್ಪಾ, ಸ್ವಲ್ಪ ಆ ಹುಡುಗನನ್ನು ನೋಡಿ,
ಅದೇನು ವೇಷನೋ ಬಿಲ್ಕುಲ್ ಹುಡುಗಿ ತರಹ ಕಾಣ್ತಾನೆ,"
ಪಕ್ಕದವರು ಸ್ವಲ್ಪ ಖಿನ್ನರಾಗಿಯೇ ನುಡಿದರು. " ನೋಡಿ ಅವಳು ಹುಡುಗ ಅಲ್ಲ.
ಅವಳು ನನ್ನ ಮಗಳು."
"ಕ್ಷಮಿಸಿ ನನಗೆ ಗೊತ್ತಾಗಲಿಲ್ಲ, ನೀವು ಅವರ ತಂದೆ ಅಂತ."
"ಏನಂದ್ರೀ ನಾನು ಅವಳ ತಂದೆಯಲ್ಲ. ತಾಯಿ.!"
+++++++++++
INTELLIGENT HONESTY.

A lady lost her handbag in the bustle of Christmas shopping. It was found by an honest little boy and returned to her.
Looking in her purse, she commented, “That's funny. When I lost my bag there was a $20 bill in it. Now there are twenty $1 bills.“
The boy quickly replied, “That's right, lady. The last time I found a lady's purse, she didn't have any change for a reward.“
Stray humour, author unknown ( In  Times of India)
ಅಭಿಪ್ರಾಯ ಭೇದಗಳನ್ನು
ಪರಸ್ಪರ ಗೌರವಿಸಿದರೆ,
ಈ ಜಗತ್ತಿನಲ್ಲಿ ನೂರಕ್ಕೆ
ತೊಂಬತ್ತರಷ್ಟು ಜಗಳಗಳು
ಆಗುವುದೇ ಇಲ್ಲ.
*****ದಾರ್ಶನಿಕ
ಬರೆ.
ಓಡು ಅಂದರ
ಓಡ ಬಹುದು,
ಹಾಡು ಅಂದರೆ
ಯಾರೋ ಬರೆದ
ಹಾಡನ್ನು ಹೇಗಾದರೂ ಹಾಡಬಹುದು,
ಆದರೆ ಬರೆ ಅಂದರೆ
ಕೂಡಲೇ ಬರೆಯಲಾಗುತ್ತದೆಯೇ?
ವಿಷಯಗಳು ಬೇಕು
ಭಾವಗಳು ಬೇಕು
ಅವು ಭಾವನೆಗಳಾಗಿ
ಮನದಲ್ಲಿ ಮೂಲೆಗಳಲ್ಲಿ ಅರಳಬೇಕು,
ಹಾಗೆ ಅರಳಿದ ಭಾವನೆಗಳು
ಮನದಂಗಳದಲ್ಲಿ ಸೇರಿ
ಒಂದಕ್ಕೊಂದು ಮಿಡಿಯ ಬೇಕು
ಮತ್ತೆ ಪದಪುಂಜಗಳ ಸರದಿ,
ಭಾವನೆಗಳನ್ನು ತರೆದಿಡುವ
ಶಬ್ದಗಳನ್ನು ಹುಡುಕಿ ತಂದು
ಜೋಡಿಸಿ ಸಾಲುಗಳಾಗಿ ಹೆಣೆಯ ಬೇಕು,
ಕೊನೆಯದಾಗಿ ಈ ಶಬ್ದ ಸಂಯೋಜನೆಯನ್ನು
ಅರ್ಥವಾಗಿಯೋ, ಅರ್ಥ ಮಾಡಿಕೊಂಡೆವೆಂದುಕೊಂಡೋ,
ಇಲ್ಲಾ, ಅರ್ಥವಾಗದೆ ಇದ್ದರೂ,
ಆಗಿದೆ ಎಂದು ವ್ಹಾ ವ್ಹಾ ಅಂದುಕೊಂಡೋ
ಓದುವವರಂತೂ ಬೇಕೇ ಬೇಕು.
ಯಾರಾದರೂ, "ಬರೆದದ್ದಕ್ಕೆ ಅರ್ಥವೇ ಇಲ್ಲ"
ಅಂದರೆ ಅದು ನವ್ಯ ಕವಿತೆ, ಅದರ ನವ್ಯಾರ್ಥ
ನಿಮ್ಮಂಥ ಪಾಮರರಿಗೆ ಅರ್ಥ ಆಗಲು
ಸಾಧ್ಯವಿಲ್ಲ ಎನ್ನುವ ಛಾತಿ ಬರೆದವನಿಗೆ ಇರಬೇಕು.
*********
25.12.2014
ಒಂಟಿ ಮರ.
--------------
ಒಣಗಿ ನಿಂತ
ಒಂಟಿ ಮರ
ಸುತ್ತಲೂ ಕಾಡು,
ಆದರೆ ಮರಗಳೇ ಇಲ್ಲ.
ಅದು ಮರಳುಗಾಡು,
ಎಲ್ಲಿಯೂ ಹಸಿರಿಲ್ಲ
ಬರೀ ಬಿಸಿ, ಬರೀ ಬಿಸಿಲು,
ಕಣ್ಣ ದೃಷ್ಟಿ ಚಾಚುವವರೆಗೆ
ಬರೇ ಕೆಂಪು ಮರಳರಾಶಿ,
ಉರಿಯುವ ಬೇಗೆಯಲ್ಲಿ
ಕಣ್ಣಿಗೆ ಮರಳು ರಾಚುವ ಗಾಳಿ
ಚೆದುರಿತು ಬುಡದ ಮರಳು
ಉರುಳಿತು ಆ ಒಂಟಿ ಮರ,
ಗಾಳಿ ಬಿರುಗಾಳಿಯಾಯಿತು
ಬಿರುಗಾಳಿ ಮರಳಧಾರೆಯಾಯಿತು,
ಮರಳ ರಾಶಿಯಲ್ಲಿ, ಪಾಪ,
ಉರುಳಿದ ಮರ ಮುಚ್ಚಿ ಹೋಯಿತು,
ಎಂದೆಂದಿಗೂ ಮರೆಯಾಗಿ ಹೋಯಿತು.
23.12.2014
ಸಾಡೆ ಸಾತಿ ಶನಿ, ಸಾಡೆಸಾತಿ
ಮುಗಿದ ನಂತರವಾದರೂ
ಬಿಟ್ಟು ಹೋಗುತ್ತದೆ. ಆದರೆ
ಗಂಡ ಅಥವಾ ಹೆಂಡತಿಯ
ರೂಪದಲ್ಲಿ ಶನಿ ಅಂಟಿ ಕೊಂಡರೆ, 
ಅದು ಮನುಷ್ಯನ ಜೀವಮಾನದ
ಸಂಗಾತಿ ಆಗಿರುತ್ತದೆ..
*****ದಾರ್ಶನಿಕ
ಯಾವಾಗಲೂ ಬೇರೆಯವರ ನಿರ್ಧಾರಗಳನ್ನು
ಟೀಕಿಸುವವರಿಗೆ, ಸ್ಡಂತ ವಿಷಯಗಳಲ್ಲೂ ಸ್ವತಃ
ನಿರ್ಧಾರಗಳನ್ನು ತೆಗೆದು ಕೊಳ್ಳುವ ಶಕ್ತಿ ಇರುವುದಿಲ್ಲ.
********ದಾರ್ಶನಿಕ
ಜೀವನದಲ್ಲಿ ಮನುಷ್ಯ ಮಾಡುವ
ತಪ್ಪುಗಳು ಎಣಿಸಲಾಗದಷ್ಟು.
ಅದರೆ ಅವುಗಳಲ್ಲಿ ಒಂದು
ಮಾತ್ರ ಅವನು ಮಾಡಿದ್ದಲ್ಲ.
ಅದು ಅವನ ಹುಟ್ಟು.
*****ದಾರ್ಶನಿಕ

ಹಗಲು - ಇರುಳು 

ಚಂದಿರ
ಹಗಲನ್ನು
ನೋಡಿದ್ದಾನೆ,
ಆದರೆ,
ಸೂರ್ಯ
ಇರುಳನ್ನು
ನೋಡೆ ಇಲ್ಲ.......


20.12.2014


 Pillion Rider

ಹಲವು ವರ್ಷಗಳ ಹಿಂದೆ, ನಾನಿದ್ದ ಊರಿನಲ್ಲಿ ಒಬ್ಬರು LIC Dev. Officer ಇದ್ದರು. (ಭಟ್ ಅಂತ ಹೆಸರು) ಅವರ ಹತ್ತಿರ ಒಂದು bullet motor cycle ಇತ್ತು. ಗಾಡಿಯಲ್ಲಿ ಹೆಂಡತಿಯನ್ನು ಹಿಂದೆ ಕೂಡಿಸಿಕೊಂಡು ಅಲ್ಲಿ ಇಲ್ಲಿ ತಿರಗುತ್ತಿದ್ದರು.
ಅವರ ಹಂಡತಿ ಮನೆ ಬಿಟ್ಟು ಮನೆಗೆ ಬರುವವರೆಗೆ ಒಂದೇ ಸಮನೆ ಮಾತನಾಡುತ್ತಲೇ ಇರುವುದು, ಇವರು ಊಂ..ಊಂ.. ಅನ್ನುತ್ತಿರುವುದು ವಾಡಿಕೆ.
ಒಂದು ದಿನ ಮಾರ್ಕೆಟ್ ನಿಂದ ಬರುವಾಗ ಇದ್ದಕ್ಕಿದ್ದಂತೆ ಹೆಂಡತಿಯ ಮಾತು ನಿಂತಿತು. ಸಧ್ಯ ಸುಮ್ಮನಾದಳಲ್ಲಾ, ಅಂದು ಕೊಂಡು ಭಟ್ಟರು ಸೀದಾ ಗಾಡಿ ಹೊಡೆದುಕೊಂಡು ಮನೆಗೆ ಬಂದರು, ಆದರೆ, ಹಿಂದೆ ನೋಡಿದರೆ ಹೆಂಡತಿ ಇಲ್ಲ....ಭಟ್ಟರು ಕಂಗಾಲಾಗಿ ಗಾಡಿ ಹಿಂದೆ ಓಡಿಸಿದರು.
ಅರ್ಧ km ದೂರವಿದ್ದ police station ಎದುರು ಇವರ ಗಾಡಿಯನ್ನು ಸ್ನೇಹಿತನೇ ಆಗಿದ್ದ PSI ನಿಲ್ಲಿಸಿದ. "ಏನು ಭಟ್ಟರೇ, ವೈನಿಯನ್ನು station ಎದುರು ಕೆಡವಿ ಹೋಗಿದ್ದೀರಲ್ಲ, ಸದ್ಯ, ಪೆಟ್ಟೇನೂ ಆಗಿಲ್ಲ" ಅಂದ.
ಅಷ್ಟರಲ್ಲಿ ದುಮುಗುಡುತ್ತಿದ್ದ ಹೆಂಡತಿ ಬಂದು ಗಾಡಿ ಹತ್ತಿ ಕೂತು, "ನಡೀರಿ" ಎಂದು ಗದರಿದಳು. ಮನೆಗೆ ಬಂದ ನಂತರ ಭಟ್ಟರ ಗತಿ ಏನಾಗಿರ ಬೇಕು ಎಂಬುದನ್ನು ನೀವೇ ಯೋಚಿಸಿ.... 
ಏರು ತಗ್ಗುಗಳಿರುವ ದಾರಿಯಲ್ಲಿ
ಕುರುಡ ಕೈಮುಟ್ಟಿ, ಕೋಲಿನಲ್ಲಿ ತಟ್ಟಿ ತಟ್ಟಿ,
ನಿಧಾನವಾಗಿ ಸಾಗಿ, ಬೀಳದೆ ಗುರಿ ಮುಟ್ಟುತ್ತಾನೆ.
ಆದರೆ ಕಣ್ಣಿದ್ದ ಕುರುಡ, ಅಹಂಕಾರವೆಂಬ
ಅವಸರದಿಂದ ಮುನ್ನುಗ್ಗಿ ಎಡವಿ ಬಿದ್ದು
ಗುರಿ ಮುಟ್ಟುವುದರಲ್ಲಿ ಅಸಫಲನಾಗುತ್ತಾನೆ.
****ದಾರ್ಶನಿಕ
ಕೆಟ್ಟ ಮಾತಿನ ಚಾಟಿಯಿಂದ
ಆಗುವ ನೋವು, ಯಾವುದೇ
ಇತರ ಹರಿತವಾದ
ಆಯುಧದಿಂದ ಆಗುವುದಿಲ್ಲ.
*****ದಾರ್ಶನಿಕ

Tuesday, 16 December 2014

ತುಂಬಾ ಅರ್ಥಪೂರ್ಣವಾದ ಮಾತು.
ಈ ಬುದ್ಧಿವಂತಿಕೆಯಿದ್ದರೆ, ಇಲ್ಲದಿದ್ದರೆ
ಬೆಳಸಿಕೊಂಡರೆ, ಮನುಷ್ಯ ತನ್ನ ಎಲ್ಲಾ
ಕಾಲಮಾನಗಳಲ್ಲಿ, ಮುಖ್ಯವಾಗಿ
ವೃದ್ಧಾಪ್ಯದಲ್ಲಿ ಸುಖ ಮತ್ತು ನೆಮ್ಮದಿಯ
ಜೀವನ ನಡೆಸ ಬಹುದು.

Shiva and his family on a ride. Friend ಒಬ್ಬರ timeline ನಿಂದ download ಮಾಡಿದ್ದು. ಈಗ ಯಾರೆಂದು ನೆನಪಾಗ್ತಾ ಇಲ್ಲಾ. ಯಾರೂ, ದೇವರನ್ನು ಲೇವಡಿ ಮಾಡ್ತಿದ್ದಾರೆಂದು ತಿಳೀ ಬೇಡಿ, ಈ ರೀತಿಯ ವೇಷಗಳನ್ನು ಹಾಕಿಕೊಂಡು ಓಡಾಡುವುದು ನವರಾತ್ರಿಯಂಥ ಹಬ್ಬಗಳಲ್ಲಿ ಸಾಮಾನ್ಯ. ಅಂಥ ಕಲಾವಿದರಿಗೆ ಸ್ವಲ್ಪ ಮಟ್ಟಿನ ಹೊಟ್ಟೆಪಾಡು ಸಹ, ಯಾಕಂದರೆ ಖುಶಿಪಟ್ಟ ನೋಡುಗರು ಕಿಂಚಿತ್ ಹಣ ಸಹ ಕೊಡುತ್ತಾರೆ.

14.12.2014
ರೋಮಾಂಚನ.

ನಿನ್ನನಪ್ಪಿ ಬರಸೆಳದು
ಎದೆಗವಚಿಕೊಳ್ಳುವಾಸೆ,
ನಿನ್ನ ನಲಿವ ಮುಂಗುರಳಲಿ
ಬೆರಳಾಡಿಸಿ ಸುಖಿಸುವಾಸೆ,
ನಿನ್ನ ತುಂಬುಗೆನ್ನೆಗಳನ್ನು,
ಮಲ್ಲಗೆ ಹಿಂಡಿ ನಸುಗೆಂಪು
ಮಾಡುವ ತಡೆಯದ ತವಕ,
ನಿನ್ನ ಎಸಳು ಕಿವಿಗಳಲ್ಲಿ ಪಿಸುಗುಟ್ಟಿ
ಬಿಸಿಯುಸಿರ ಬಿಡುವ ಸವಿ ಬಯಕೆ,
ನಿನಗೆ ಎಲ್ಲೆಂದರಲ್ಲಿ ಕಚಗುಳಿಯಿಟ್ಟು,
ನಿನ್ನ ಕೆಂಪು ಚೆಂದುಟಿಗಳಲ್ಲಿ
ಕಲ್ಮಷವಿಲ್ಲದ ನಗುವರಳಿಸುವಾಸೆ,
ನಿನ್ನ ಗೋದಿಬಣ್ಣದ ಮಿದುಮೈಯ
ನವಿರಾಗಿ ಸವರಿ, ಸವರಿ,
ಹಿತ ರೋಮಾಂಚನಗೊಳ್ಳುವಾಸೆ.
ಮಗುವೇ, ನಿನ್ನ ಮುದ್ದಾದ ಕೆಂಪು
ಪಾದಗಳಿಂದ ಎದೆಗೊದೆಸಿಕೊಂಡು
ಧನ್ಯನಾಗುವೆ, ಬಳಿಗೆ ಬಾ ನನ್ನ ಕಂದ.
14.12.2014
ಮನುಷ್ಯನ ಜೀವನದಲ್ಲಿ
ಸುಖದ ಸಮಯವೆಂದರೆ,
ಅದು ಅವನು ನಿದ್ರಿಸುವ ಸಮಯವಷ್ಟೆ.
ಅದರಲ್ಲೂ, ನನಸಾಗದ ಸುಖದ
ಕನಸುಗಳು ಬೀಳುವ ಸಮಯ
ಅತ್ಯಂತ ಸುಖದ ಸಮಯ.
***ದಾರ್ಶನಿಕ.
ಸಾಮರಸ್ಯವಿಲ್ಲದ ಎರಡು
ಮನಸ್ಸುಗಳ ನಡುವಿನ
ದೂರವೇ ಈ ಪ್ರಪಂಚದಲ್ಲಿ
ಎಲ್ಲಕ್ಕಿಂತ ಹೆಚ್ಚಿನ ದೂರ.
****ದಾರ್ಶನಿಕ

12.12.2014

ಸಂತೋಷ 

ಸಂತೋಷವೇ ಜೀವನ,
ಹೃದಯ ತುಂಬಿ ಬರುವ
ನಗುವೇ ನಮ್ಮೀ ಜೀವನದಲ್ಲಿ
ಅರಳುವ ಹೂವುಗಳು,
ಮುದ್ದು ಮಕ್ಕಳೇ ಸಿಹಿ ಫಲಗಳು.
ನಶ್ವರವಾದ ಈ ಬದುಕನ್ನು
ಕಳೆಯೋಣ ನಗು ನಗುತ್ತಾ
ಇದ್ದಷ್ಟು ದಿನ ಎಂದುಕೊಂಡರೆ,
ಸುಖದ ಬದುಕು ಬೆಳೆಯುತ್ತದೆ
ಮತ್ತಷ್ಟು, ಮತ್ತಷ್ಟು, ಇನ್ನಷ್ಟು ದಿನ.
11.12.2014

Wednesday, 3 December 2014

ಆ ಕಣ್ಣು....
ಅವಳು ಇವನ
ಕಡೆ ನೋಡಿ
ಕಣ್ಣು ಮಿಟುಕಿಸಿ
ಕೆನ್ನೆ ತೋರಿಸಿದಳು.
ತಬ್ಬಿಬ್ಬಾದ,
ಕಣ್ಣು ಹೊಸಕಿಕೊಂಡು
ಮತ್ತೊಮ್ಮೆ ನೋಡಿದ,
ಹೌದು, ಕಣ್ಣು ಮಿಟುಕಿಸಿದಳು
ಮತ್ತೊಮ್ಮೆ !!!!
ಬಂತವನಿಗೆ ಎಲ್ಲಿಲ್ಲದ
ಧೈರ್ಯ.....
ಹೆಜ್ಜೆಯ ಮೇಲೆ
ಹೆಜ್ಜೆಯಿಟ್ಟು ಮುಂದುವರೆದು
ಬರಸೆಳೆದು ತಬ್ಬಿ
ಕೆನ್ನೆಗೊಂದು ಇಕ್ಕಿಯೇ ಬಿಟ್ಟ.
ಗರಕ್ಕನೆ ತಿರುಗಿದ ಕನ್ಯೆ
ಉರಿ ನೋಟ ಬೀರಿ
ಇಕ್ಕಿದಳು ಇವನ
ಕೆನ್ನೆಗೊಂದು ಏಟು..
ಕೆಂಪೇರಿದ ಕೆನ್ನೆ ಸವರಿಕೊಂಡು
ಹಿಂತಿರುಗಿ ನೋಡದೆ
ಅಲ್ಲಿಂದ ಓಟ ಕಿತ್ತ..... !!!!
ಅವನಿಗೇನು ಗೊತ್ತು, ಪಾಪ
ಅವಳ ಕಣ್ಣೇ
ಮಿಟುಕು ಕಣ್ಣೆಂದು... 
03.12.2014.
ಗೊತ್ತಿಲ್ಲ.
ನೀನು ಯಾರು?
ಗೊತ್ತಿಲ್ಲ,
ನಿನ್ನ ಊರು ಯಾವುದು?
ತಿಳಿಯದು.
ನೀನಿರುವುದು ಎಲ್ಲಿ?
ಗೊತ್ತಿಲ್ಲ.
ಎಲ್ಲಿಗೆ ಹೊರಟಿರುವೆ?
ಅದೂ ತಿಳಿಯದು!
ಮತ್ತೆ? ಮುಂದೇನು?
ಮುಂದೇನು ಅಂದರೆ.....
ಈ ದಾರಿಯೊಂದೇ ನನ್ನದು,
ಇದೇ ನನ್ನ ಗುರಿಇಲ್ಲದ ಪಯಣ
ಮಸಣದವರೆಗೆ ಯಾತ್ರೆ.
03.12.2014

Tuesday, 2 December 2014

ತಾತ, ನಿನ್ನ ಆರೋಗ್ಯ ಹೇಗಿದೆ ನೋಡ್ತೀನಿ, ಇರು....... 
Happiness is Bliss,
Hearty laughter is Heaven,
Lively mood is a boon
Beauty is a feast to eyes.
ಕನಸು - ನನಸು

ಇರುಳು ಸರಿಯಿತು
ಕನಸು ಹರಿಯಿತು
ಕನಸು ನನಸಾಗದೆ
ವಾಸ್ತವ ಎದುರಾಯಿತು
ಕಾಣುವಂತಿಲ್ಲ
ಹಗಲಿನಲಿ ಕನಸು
ಎದುರಿಸಲೇಬೇಕು
ನೈಜದ ನನಸು
ಕಾಯಲೇ ಬೇಕು
ಇರುಳಿನ ನಿದಿರೆಯ
ಕಾಣಲು ಮತ್ತೆ
ಮೋಸದ ಕನಸು
ಸವಿಗನಸುಗಳು
ನನಸಾದರೆಷ್ಟು ಚೆಂದ
ಆ ಭಾಗ್ಯ ಯಾರಿಗೂ
ಇರದು ನೆನಪಿರಲಿ ಎಂದೂ.
*********
29.11.2014