Friday, 11 August 2017

ಓ ಇನಿಯಾ..ನೀ ಸನಿಹಾ.. 
*********************
ಈ ಇನಿಯ
ಬಲು ಸನಿಹ,
ಈ ಸಂಭಾಷಣೆ
ಅತಿ ಮಧುರ,
ಈ ಪ್ರಕೃತಿ
ಅತಿ ಸುಂದರ,
ಮಿನುಗುತಿದೆ ಬಾನು
ಹೊಳೆಯುತಿದೆ ನೀರು
ನಮ್ಮ ಜೀವನವೆಲ್ಲ
ಹಸಿರೋ ಹಸಿರು
ನಮ್ಮ ಹೆಸರೇ
ಸಹ ಬಾಳು,
ಈ ಭುವಿಯ ಸವಿಯೆಲ್ಲ
ನಮಗೇ ಮೀಸಲು
ನನಗೆ ನೀನು
ನಿನಗೆ ನಾನು,
ಈ ಜೇನ ಹೊಳೆಯೇ
ನಮಗೆ ಮೀಸಲು
ನಮಗೆ ಈಸಲು.
...‌...ಮಿಲನ‌‌
=================™
ನಾನು ಬಲು ಸನಿಹ,
ನಾನು ಬಲು ದೂರ,
ನಾನಿರುವೆ ಮುಂದಿನ
ತಿರುವಿನ ಮೂಲೆಯಲ್ಲಿ
ಆದರೂ ನೀ ನನ್ನ ಕಾಣಲಾರೆ
ನನ್ನಿರುವ ನೀ ಎಣಿಸಲಾರೆ
ನಾ ಬಂದೇ ಬರುವವನೆಂದು
ನಿನಗೆ ಖಂಡಿತಾ ಗೊತ್ತು,
ಆದರೂ, ನಾ ನಿನಗೆ ಬೇಡದವ
ನಾನು ನೀನೆಂದೂ ಬಯಸದವ
ನೀ ಕಾಯದಿದ್ದರೂ ನನ್ನ,
ನಾನಂತೂ ಕಾಯುತಿರುವೆ ನಿನ್ನ,
ನಮ್ಮೀರ್ವರ ಅಂತರ ಕಾಲ,
ಕಾಲ ಕೂಡಿ ಬಂದಾಗಲೇ
ನಮ್ಮ ಬಿಡಿಸಲಾರದ ಮಿಲನ
ನಮ್ಮ ಬಿಡಿಸಲಾರದ ಮಿಲನ.

ನನ್ನ ಮಂದಸ್ಮಿತೆ
+++++++++++
ಮಂದಹಾಸದ
ಮಂದಸ್ಮಿತೆ,
ಅರೆಬಿರಿದ ಮೊಗ್ಗು
ಕಣ್ಣಿಗೆ ಮುದ್ದು,
ತಿದ್ದಿ ತೀಡಿ ದೇವ
ಕಡೆದ ಈ ಶಿಲ್ಪ
ಕಣ್ಣುಗಳಿಗೆ ಹಬ್ಬ,
ಬಟ್ಟಲು ಕಂಗಳ
ನಲಿವ ನೋಟ
ನೋಡುವುದೇ
ಒಂದು ಹಿಗ್ಗು,
ಅರವಿಂದದಲಿ
ತುಂಬಿ ತುಳುಕುವ
ನಯ ವಿನಯ
ಸದಾ ಕಣ್ಣುಗಳಿಗೆ ತಂಪು
ಈ ಹಿಗ್ಗು ಚಿರವಾಗಿರಲಿ,
ಮಗಳೆ, ನಿನ್ನ ಬಾಳು
ಎಂದೆಂದಿಗೂ ಹಸಿರಾಗಿರಲಿ.
ಇತಿ,
ನಿನ್ನ ತಂದೆ.