Sunday, 1 March 2015

ನನಗೆ ಸಿಟ್ಟು
+++++++
ನಗುವುದ ಮರೆತವರ
ಕಂಡರೆ ನನಗೆ ಸಿಟ್ಟು
ಅಳುವವರ ಸೋಗನು
ಕಂಡರೂ ಸಿಟ್ಟು.
ಮಗುವನು ಮಗುವಾಗಿ
ಕಾಣದವರ ಕಂಡರೆ ಸಿಟ್ಟು
ತಾವೊಮ್ಮೆ ಮಗುವಿದ್ದೆವಂಬುದ
ಮರೆತವರ ಕಂಡರೆ ಸಿಟ್ಟು
ಸತ್ಯದ ತಲೆ ಮೇಲೆ
ಹೊಡೆದಂತೆ ಸುಳ್ಳು
ಹೇಳುವವರೆಂದರೆ ಅತಿ ಸಿಟ್ಟು
ಇನ್ನು ಸುಳ್ಳನ್ನೇ
ಸತ್ಯವೆಂದು ಸಾಧಿಸುವವರ
ಕಂಡರೆ ಇನ್ನಿಲ್ಲದ ಸಿಟ್ಟು.
ಕಣ್ಣಿಗೆ ಕಾಣುವ ಜಗತ್ತೇ ಮಿಥ್ಯ
ಎಂದೂ, ಯಾರೂ ಕಾಣದ
ಪರಮಾರ್ಥವೇ ಸತ್ಯ
ಎಂದು ವಾದಿಸುವವರ
ಕಂಡರೇಕೋ ವಿಚಿತ್ರ ಸಿಟ್ಟು.
ಮೆಟ್ಟಲನು ಮರೆತವರೆಂದರೆ
ವಿಪರೀತ ವೇದನೆಯ ಸಿಟ್ಟು,
ಕೆಲಸವಾದ ನಂತರ
ಅಂಬಿಗನನ್ನು ಮಿ...ಡ
ಅನ್ನುವವರನು ಕಂಡರೆ ಸಿಟ್ಟು.
ಇದ್ದವರನ್ನು ಹಳಿದು
ಹೋದವರನ್ನು ಹೊಗಳುವವರ
ಕಂಡರೆ ಬಲು ಸಿಟ್ಟು,
ಕಂಡೂ ಕಾಣದಂತೆ
ಹೋಗುವವರೆಂದರೆ ಸಿಟ್ಟು.
ಗಳಿಸಿಟ್ಟು ಅನುಭವಿಸದವರ
ನೋಡಿದರೆ ವಿಪರೀತ ಸಿಟ್ಟು,
ಪರರ ಗಳಿಕೆಯ ಮೇಲೆ
ಬದುಕುವವರ ಕಂಡರೆ ಸಿಟ್ಟು.
ಮಕ್ಕಳನ್ನು ಲಾಲಿಸಲು
ಸಮಯವಿಲ್ಲದ ಪಾಲಕರೆಂದರೆ
ತಾಳಲಾರದ ಸಿಟ್ಟು,
ಮುದಿಪ್ರಾಯದಲ್ಲಿ ಪಾಲಕರ
ಪೋಷಿಸದ ಮಕ್ಕಳೆಂದರೆ ಸಿಟ್ಟು.
ಬದುಕನು ಪ್ರೀತಿಸದವರ
ಕಂಡರೆ ಬಹಳ ಸಿಟ್ಟು,
ಕೊನೆಗೆ ನನಗಷ್ಟೇ
ಏಕಿಷ್ಟು ಯೋಚನೆಯೆಂದು
ನನ್ನ ಮೇಲೇನೇ ಸಿಟ್ಟು..... frown emoticon
***********

No comments:

Post a Comment