Sunday, 7 February 2016

" ಭಯವೇಕೆ ಎನ್ನರಸಿ?
---------------------------------
ವಯಸಾಯ್ತು ನಿನಗೆಂದು ಚಿಂತಿಸಲು ಬೇಡವೇ
ಆಗಿಲ್ಲವೇ ನನಗೆ ನಿನಗಿಂತ ಹೆಚ್ಚು ||
ಮಾಸುತಿದೆ ಸೌಂದರ್ಯ ಎಂದು ಕೊರಗುವೆಯೇಕೆ ?
ಹೇಗೆ ಇರು ನೀ ಎನಗೆ ಅಚ್ಚು ಮೆಚ್ಚು || ೧ ||
ಹೆತ್ತು ನೀ ಕೊಟ್ಟಿರುವೆ ಮುತ್ತಂತ ಮಕ್ಕಳನು
ಸಂಸ್ಕಾರ ಕೊಟ್ಟಿಹೆವು ಜತನದಲ್ಲಿ ||
ಅವರವರ ಬಾಳನ್ನು ಕಟ್ಟಿಕೊಳ್ಳುವರವರು
ದುಗುಡವ್ಯಾತಕೆ ಹೇಳು ನಿನ್ನ ಮನದಲ್ಲಿ ? || ೨ ||
ಮಕ್ಕಳನು ಪ್ರೀತಿಯಲಿ ಬೆಳೆಸುವುದು ಕರ್ತವ್ಯ
ಅದನು ಮಾಡಿಹೆವಲ್ಲ ಶ್ರದ್ಧೆಯಲ್ಲಿ ||
ಬೇಕಿಲ್ಲ ಇನ್ನೇನು ಸಾಕೆನ್ನುವುದೆ ಮಂತ್ರ
ವಿದುರ ಮಾದರಿ ನಮಗೆ ಬದುಕಿನಲ್ಲಿ || ೩ ||
ಈ ದೇಹ ಸೋಲುತಿದೆ ಎಂದೇಕೆ ಮರುಗುವೇ
ಶಾಶ್ವತವು ಯಾವುದಿದೆ ಜಗದ ಒಳಗೆ ||
ಬಂದದ್ದು ಬರುತಿರಲಿ ಎದುರಿಸುವ ಮನವಿರಲಿ
ಹೆಜ್ಜೆ ಇಡು ಧೈರ್ಯದಲಿ ನನ್ನ ಜೊತೆಗೆ || ೪ ||
ಬೆಚ್ಚನೆಯ ಮನೆಯಿಹುದು ವೆಚ್ಚಕ್ಕೆ ಹೊನ್ನಿಹುದು
ಜೊತೆಗಾತಿಯಾಗಿ ನೀ ಜೊತೆಯಲಿರುವೆ ||
ಕಣ್ಣ ರೆಪ್ಪೆಯ ತರದಿ ನಾ ನಿನ್ನ ಕಾಯುವೆನು
ಭಯವೇಕೆ ಎನ್ನರಸಿ ನಾನಿಲ್ಲವೆ || ೫ ||
ನಾಳಿನಾ ಚಿಂತೆಯಲಿ ಇಂದು ಬೆದರುವೆಯೇಕೆ ?
ಆಗಬೇಕೆನ್ನುವುದು ಆಗೆ ಸಿದ್ಧ ||
ಹಣೆಯ ಬರಹವನಂದು ಆ ಬ್ರಹ್ಮ ಬರೆದಾಯ್ದು
ಬದುಕು ಅದರಂತೆಯೇ ಆಗಿ ಬದ್ಧ || ೬ ||
- ಸುರೇಖಾ ಭೀಮಗುಳಿ
07/01/2016
ಹಿಂದಿನ ವರ್ಷಗಳು
ಮುಂದಿನ ವರ್ಷಗಳಿಗಿಂತ
ಹೆಚ್ಚಾದವು ಎಂದು
ಗೊತ್ತಾಗುವ ಸಮಯವೇ
ಮನುಷ್ಯ ತನ್ನ ಜೀವನದ
ಮಧ್ಯಂತರ ಮೌಲ್ಯ ಮಾಪನ
ಮಾಡಿಕೊಳ್ಳಲು ಸಕಾಲ.
******ದಾರ್ಶನಿಕ
ದುಷ್ಟರೊಡನೆ ಸ್ನೇಹ
ಹೇಗೆ ಬೆಳಸ ಬಾರದೋ,
ಹಾಗೇನೇ ಜಗಳವನ್ನೂ
ಮಾಡಬಾರದು.
****** ದಾರ್ಶನಿಕ

Sunday, 3 January 2016

ಸಿಂಪ್ಲೀ ಕಚಗುಳಿ.......ಓದಿ ಎಂಜಾಯ್ ಮಾಡಿ.......ಖಾರಾಬಾತ್ ಕಾಮೆಂಟುಗಳು.
ಒಂದನೇಯ ತಾರೀಕಿನ ವಿಜಯವಾಣಿ ಓದದವರಿಗಾಗಿ....ಹಾಗೂ ತರ್ಲೆ ಕಾಮೆಂಟ್ಸ್
ಇಷ್ಟ ಪಡುವವರಿಗಾಗಿ, ಭಾನುವಾರದ ಮನರಂಜನೆ.... 
smile emoticon


ಇವು 2016 ವರ್ಷದ ಮೊದಲನೆ ದಿನದ ಧ್ಯೇಯ ವಾಕ್ಯಗಳು.....
ಈ ವರ್ಷದಲ್ಲಿ ಯಾರ್ಯಾರ ಧ್ಯೇಯವಾಕ್ಯಗಳೇನೇನು ಎಂಬುದನ್ನು ಖ್ಯಾತ ವ್ಯಂಗ್ಯ ಚಿತ್ರಕಾರರು ಇಂದಿನ ವಿಜಯವಾಣಿಯ
ಮುಖಪುಟದಲ್ಲಿ ಚೆನ್ನಾಗಿ ಕೊಟ್ಟಿದ್ದಾರೆ......
ವಿಜಯವಾಣಿ ಓದಿರದವರಿಗಾಗಿ
ಇಲ್ಲಿದೆ ಈ ಮುಖಪುಟ......ವ್ಯಂಗ್ಯ ಚಿತ್ರಗಳು ಮತ್ತು narrations ಸತ್ಯಕ್ಕೆ ಅತೀ
ಹತ್ತಿರವಾಗಿವೆ ಮತ್ತು ನಕ್ಕು ನಕ್ಕೂ ಸಾಕಾಗುವಂತಿವೆ.

Friday, 1 January 2016

ನಿನ್ನ ನಡಿಗೆಯೇ
ನವಿಲ ನಡೆ,
ನಿನ್ನ ಕುಡಿನೋಟವೇ
ನನ್ನದೆಯ ಬೆಳಗುವ
ಬೆಳಕಿನ ಚೆಂಡು,
ಮಂದಸ್ಮಿತ
ಅರೆ ಬಿರಿದ ತುಟಿಗಳು
ನನ್ನೆದೆಯಲ್ಲಿ
ಈಗ ತಾನೇ
ಅರಳಿದ ಕುಸುಮಗಳು,
ಹೀಗೇ ಜಿಗಿಜಿಗಿದು
ಬಾ ನನ್ನ ಓಲೈಸು.
ನನ್ನೆದೆಯ ಅಂಗಳದಲ್ಲಿ
ನಿನ್ನ ಕೆಂಪು ಪಾದಗಳ
ಗುರುತುಗಳನಿರಿಸು,
ಕಲ್ಮಶ ಕಪಟವಿಲ್ಲದ
ಈ ನಿನ್ನ ಹೂ ನಗೆ
ಎಂದೆಂದೂ ಬಾಡದಿರಲಿ,
ನನ್ನ ಮನವನೆಂದೂ
ನಿಲ್ಲದೆ ಮಿಡಿಯುವ
ಚೆಲುವಿನ ಚಿಲುಮೆಯಾಗಿರಲಿ
ಈ ಹೊಸ ವರ್ಷಕ್ಕೆ
ಶಕ್ತಿಯ ಸೆಲೆಯಾಗಿರಲಿ.... smile emoticon
*************************
ವರ್ಷ ಹೊಸದಾಯಿತು,
ಜೀವ ಹಳೆಯದಾಯಿತು.
****ದಾರ್ಶನಿಕ.