Friday, 10 April 2015

ನನಗೂ ನವ್ಯ ಕವಿಯಾಗಬೇಕೆಂಬಾಸೆ,
ನಾನು ಬರೆದದ್ದು ನನಗೇ ಅರ್ಥವಾಗದೆ
ಪರಿತಪಿಸಿ ಖುಶಿ ಪಡಬೇಕೆಂಬಾಸೆ,
ಓದಿದವರು, ತಮ್ಮ ತಲೆ ಕೆರೆದು ಕೊಂಡು
ಮತ್ತೂ ಅಂದರೆ ತಲೆ ಕೆಡಿಸಿಕೊಂಡು
ಪರದಾಡಿ ನನ್ನನ್ನು ಬೈಯ್ಯಲೆಂದಾಸೆ.
ಆದರೇನು ಮಾಡಲಿ, ನಾನು ಬರೆದದ್ದು
ಬಹಳ ಸೀದಾ...ಅರ್ಥವೋ ಅನರ್ಥವೋ
ಗೊತ್ತಿಲ್ಲ, ಯಾರೂ ಈವರೆಗಂತೂ ಬೈದಿಲ್ಲ.... smile emoticon
ಎಲ್ಲಿರುವೇ...ನೀ ಕೋಗಿಲೆ
**********************
ಎಲ್ಲಿಂದಲೋ
ಕಾಣದ ಮರದೆಡೆಯಿಂದ
ಕೋಗಿಲೆಯ ಇಂಚರ
ಕೇಳಿಸುತ್ತಿದೆ
ಅದೇನು ಹಾಡೋ
ವಿರಹದ ಕರೆಯೋ
ತಿಳಿಯದು.
ನನಗಂತೂ ಆ
ದನಿ ವಿರಹದ
ವೇದನೆಯ ನೋವಿನ
ಕರೆಯಂತೆ ಕೇಳುತ್ತಿದೆ.
ಆದರೆ ಕವಿಗಳು
ಕೋಗಿಲೆ ಹಾಡುತ್ತದೆ
ಎಂದು ಬರೆಯುತ್ತಾರೆ,
ಗಾಯಕರು "ಕೋಗಿಲೆ
ಹಾಡುತಿದೆ" ಎಂದು
ತಾವೇ ಹಾಡುತ್ತಾರೆ....
ಏನು ನಿನ್ನ ಸಮಸ್ಯೆ
ಎಂದು ಕೇಳೋಣವೆಂದರೆ,
ಅದು ಕಣ್ಣಿಗೇ ಕಾಣುತ್ತಿಲ್ಲವೇ,
ತನ್ನ ರೂಪ ಮುಚ್ಚಿಡಲೋ ಏನೋ
ಅದೆಲ್ಲೋ ಅಡಗಿ ಕುಳಿತಿದೆ
ಬರೇ ದನಿ ಕೇಳಿಸುತ್ತಿದೆ
ಶೂನ್ಯವೆನಿಸುವ
ಕಾಣದ ಅನಂತದಿಂದ.....
ಕಾಣದ ಅನಂತದಿಂದ.....
08.04.2015
ವಯಸ್ಸಾಗಿ, ಸಂಸಾರ ಮತ್ತು ವ್ಯವಹಾರಗಳ
ಜವಾಬ್ದಾರಿ, ಒತ್ತಡಗಳು ಹೆಚ್ಚಿದಾಗ ಸಹ
ತನ್ನ ನಗು ಮುಖವನ್ನು ಉಳಿಸಿಕೊಂಡಿರುವವನೆ
ನಿಜವಾದ ಸುಖಪುರುಷ, ಮತ್ತು
ತನ್ನ ಬಂಧು ಬಳಗದವರಿಗೂ ಸುಖದಾಯಕ.
******ದಾರ್ಶನಿಕ.
ನನ್ನ ಕೊನೆಯ ಮನೆ
*****************
ತಲೆ ಎತ್ತಿದರೆ ಗಿರಿ,
ಕೆಳಗೆ ಇಣುಕಿದರೆ
ಈಗ ತಾನೇ ಏರಿ
ಬಂದ ಕಂದರ
ಸುತ್ತಿ ಬಳಸಿದ
ಕಡಿದಾದ ದಾರಿಗಳು,
ತಿರುವಿನವರೆಗಷ್ಟೇ
ಕಾಣುವ ಮುಂದಿನ ದಾರಿ,
ಕಂಡೂ ಕಾಣದ
ತಿಳಿ ಬೆಳಕು,
ಕೇಳಿಯೂ ಕೇಳದ
ಕುಳಿರ್ಗಾಳಿಯ ಮೊರೆತ,
ಆದರೂ ಸಾಗಲೇ ಬೇಕು
ಹಿಂದೆ ನೋಡದೆ ಮುಂದೆ,
ಮುಂದೆಲ್ಲೋ ಇದೆ
ಕಂಡೂ ಕಾಣದ ಗುರಿ,
ಮುಟ್ಟಲೇ ಬೇಕು
ತಲುಪಲೇ ಬೇಕು
ಈ ಪಯಣದ ಕೊನೆ,
ಅಲ್ಲೇ ಇದೆ ನನ್ನ ಮನೆ.
*********
06.03.2015
ತಾನೂ ಯಾರಿಗೂ
ಅನಿವಾರ್ಯವಲ್ಲವೆಂದು
ಗೊತ್ತಾದಾಗ, ಮನುಷ್ಯನ
ಅಹಂಕಾರ ತಾನಾಗಿಯೇ
ಕಡಿಮೆಯಾಗುತ್ತದೆ.
*****ದಾರ್ಶನಿಕ
ಆತ್ಮೀಯತೆ ಇಲ್ಲದ
ಕೌಟುಂಬಿಕ ಬಂಧುತ್ವಕ್ಕೆ
ಅರ್ಥವೂ ಇಲ್ಲ, ಬೆಲೆಯೂ ಇಲ್ಲ... frown emoticon
*****ದಾರ್ಶನಿಕ
ಗಂಡ ಹೆಂಡತಿ ಜಗಳವಾಡಿ
ಮಾತು ಬಿಟ್ಟಾಗ ನಡೆಯುವ
ಮೌನ ಸಂಭಾಷಣೆ.........
"ಹೆಂಡತಿ ಕಾಫಿ ಲೋಟ ತಂದು
ಡೈನಿಂಗ್ ಟೇಬಲ್ ಮೇಲೆ
ಶಬ್ದವಾಗುವಂತೆ ಕುಕ್ಕುವುದು..
ಹೊರಗಿನಿಂದ ಬಂದ ಗಂಡ
ತನ್ನ ಪ್ಯಾಂಟ್ ಶರ್ಟ್ ಗಳನ್ನು
ಸಪ್ಪಳವಾಗುವಂತೆ ಬೇಕಾದ್ದಕ್ಕಿಂತ
ಹೆಚ್ಚಾಗಿ ಝಾಡಿಸುವುದು....." .. 
ಮೀರ್ ಸಾದಿಕ್ ನಂತವರಿಗೂ,
ಈಗಿನ ಸಮಯ ಸಾಧಕರಿಗೂ
ಹೆಚ್ಚೇನೂ ವ್ಯತ್ಯಾಸವಿಲ್ಲ.
ಮೀರ್ ಸಾದಿಕ್ ನಂತವರು
ಎದುರಿಗೆ ಓಳ್ಳೇ ಮಾತನಾಡಿ,
ಬೆನ್ನಿಗೆ ಚೂರಿ ಹಾಕಿದರೆ,
ಸಮಯ ಸಾಧಕರು, ನಿಮ್ಮಿಂದ
ತಮ್ಮ ಕೆಲಸವಾಗುವವರೆಗೆ,
ಬಣ್ಣದ ಮಾತನಾಡಿ, ಹೊಗಳಿ
ಅಟ್ಟಕ್ಕೇರಿಸಿ, ತಮ್ಮ ಕೆಲಸವಾದ
ನಂತರ ಪರಿಚಯದ ಮುಗುಳು
ನಗುವನ್ನೂ ಮರೆತು ಅಪರಿಚಿತರಂತೆ
ವರ್ತಿಸಿ, ನಿಮ್ಮನ್ನು ಮಾನಸಿಕವಾಗಿ
ಹಿಂಸಿಸಿ ಘಾಸಿಗೊಳಿಸುತ್ತಾರೆ.
*****ದಾರ್ಶನಿಕ
"ಮೌನಂ ಕಲಹಂ ನಾಸ್ತಿ"
ಅನ್ನುವುದು ವಾಡಿಕೆ.
ಆದರೆ ಕೆಲವೊಮ್ಮೆ
ಕಲಹ ಮಾಡದಿದ್ದರೆ
ಕೆಲಸವೇ ಆಗುವುದಿಲ್ಲ.
******ದಾರ್ಶನಿಕ.
ಮಗುವೇ ನೀ ಸೊಗಸು...
ಮಗುವೇ, ಏನಿದೀ ನಿನ್ನ ನಗು?
ನಿನ್ನ ಕರಿ ಕಂಗಳು
ಅದೇನು ಅಚ್ಚರಿಯಲ್ಲಿ
ನೋಡುತ್ತಿವೆ?
ಈ ಜಗದ ಸೋಜಿಗ
ನೋಡಿ ಬೆರಗೇ?
ನಿನ್ನ ಅರಳಿದ ನಾಸಿಕ
ಅದೇನು ಕಂಪನು
ಸವಿಯುತ್ತಿವೆ?
ನಿನ್ನ ಪುಟ್ಟ ಬಾಯನ್ನು
ದೊಡ್ಡದಾಗಿ ತೆರೆದು
ಏನು ಹೇಳ ಬಯಸಿರುವೆ?
ಬಂದೆ ನಾ ತಡಿ,
ಎತ್ತಿ ಮುದ್ದಿಸುವೆ,
ನೀ ಸದಾ ನಗುತಿರು,
ನಿನ್ನ ಖುಶಿಯ ನನ್ನೆದೆಯಲ್ಲಿ
ತುಂಬಿಸಿ, ನನ್ನೆದೆಯನೇ
ಹಗುರಾಗಿಸಿ ಕೊಳುವೆ.
25.032015
ಮೆಟ್ಟಲುಗಳನ್ನು ಹತ್ತಿ ಮೆಲೇರಿದ
ಜನರು ಆ ಮೆಟ್ಟಲುಗಳನ್ನೇ
ಮರೆತಾಗ, ಅವು ಮೂಕವಾಗಿ
ಅತ್ತು ರೋಧಿಸುತ್ತವೆ.
*****ದಾರ್ಶನಿಕ.
ನಾಚಿದ ಕಡಲು.
+++++++++
ಕಡಲ ಕರೆಗೆ ರವಿ ಓಡೋಡಿ ಬಂದ,
ನಸು ನಾಚಿ ಕೆಂಪೇರಿದರೂ ಕಡಲು,
ಕೈಗಳನ್ನೆತ್ತಿ ಇನಿಯನ ಬರಸೆಳೆಯಿತು,
ಸವಿ ಮುತ್ತನ್ನಿತ್ತು ರವಿಯನ್ನೂ ಕೆಂಪೇರಿಸಿದ ಕಡಲು,
ಒಲವಿನ ಆಳದಲ್ಲಿ ಇನಿಯನನ್ನು ಮುಚ್ಚಿಟ್ಟು ಕೊಂಡಿತು,
ದೂರ ನಿಂತು ನೋಡುತಿದ್ದ ಚಂದ್ರ
ನಕ್ಕು ರಾತ್ರಿ ಪಾಳಿಗೆ ಮೇಲೇರಿದ........

2.03.2015 smile emoticon