Saturday, 14 February 2015

ಸ್ವರ್ಗ ಸುಖ ... frown emoticon
***************
ಮಾತಾಡಿದರೆ ಎಗರಿಬೀಳುವ
ಮಂಗೋಪಿ ಕುಡುಕ ಮಗ,
ಏನಿಲ್ಲದಿದ್ದರೂ ನಾನೆ
ಈ ಜಗದ ರಂಭೆ ಎಂದು
ಜಗತ್ತನ್ನೇ ಧಿಕ್ಕರಿಸಿ
ಮೆರೆಯುವ ಅಹಂಕಾರಿ ಸೊಸೆ,
ಬಿಸಿನೆಸ್ ಮಾಡುತ್ತೇನೆಂದು
ಶೇರ್ ಮಾರ್ಕೆಟ್ ನಲ್ಲಿ
ಎಲ್ಲಾ ಕಳೆದುಕೊಂಡು
ಮನೆ ಮಠ ಮಾರಿಕೊಂಡು
ಮನೆ ಅಳಿಯನಾಗಿರುವ
ಮೊದಲನೇ ಮಗಳ ಗಂಡ
ಗಂಡನ ಮನೆಯಲ್ಲಿ
ಕೆಂಡ ಕಾರಿ, ತಲೆ ಮಂಡೆ
ಹಿಡಿಸಿ ಹಾಕಿ, ಅಲ್ಲಿಂದ
ಗಡಿಪಾರಾಗಿ, ಇಲ್ಲೇ
ಮಕ್ಕಳೋಂದಿಗೆ ಠಿಕಾಣಿ
ಹೂಡಿ, ದಿನಾ ಜಗಳ ಕಾಯುವ
ಎರಡನೇ ಮಗಳು,
ಮೊದಲು, ನನಗೆ ಅಂಥವ
ಬೇಕು ಇಂಥವ ಬೇಕು
ಅವ ಬೇಡ. ಇವ ಬೇಡ ಎಂದು,
ನಂತರ ಯಾರೂ ಬರದೆ
ಮದುವೆಯಾಗದೆ ಮನೆಯಲ್ಲುಳಿದು
ಅದಕ್ಕೆ ಎಲ್ಲರನ್ನೂ ಶಪಿಸುತ್ತಿರುವ
ಕೊನೆಯ ಮುದ್ದಿನ ಮಗಳು,
ಯಾವಾಗಲೂ ಹೊಡೆದಾಟವೇ
ನಮ್ಮ ಆಟ ಎಂದು ಕೊಂಡು
ಇದು ಮನೆಯಲ್ಲ, ರಣರಂಗ
ಎಂದು ನೆನಪುಮಾಡಿಸುತ್ತ
ಸದಾ ಹೋರಾಡುವ
ಅರ್ಧ ಡಜನ್ ಮೊಮ್ಮಕ್ಕಳು,
ಎಲ್ಲರಿಗಿಂತ ಹೆಚ್ಚಾಗಿ,
ಎಲ್ಲಾ ಅನಿಷ್ಟಗಳಿಗೆ
ನೀವೇ ಶನೀಶ್ವರ ಹೊಣೆಯೆಂದು
ದಿನದ 24 ತಾಸು ಇವನೊಡನೆ
ಜಗಳವಾಡುತ್ತಲೇ ಇರುವ
ಮುದಿ ಹರೆಯದ ಏಕೈಕ ಹೆಂಡತಿ.
ಓಹ್, ಈ ಎಲ್ಲಾ ಸುಖಗಳ ಮುಂದೆ
ಇನ್ನ್ಯಾವುದಿದೆ ಸ್ವರ್ಗ ಸುಖ ?
ಆ ಸ್ವರ್ಗಕ್ಕೇ ಕಿಚ್ಚು
ಹಚ್ಚಿ ಬರುವೆ ಸರ್ವಜ್ಞ,
ಎಂದು ಮುದುಕ
ನಢೆದೇ ಬಿಟ್ಟ ಹಿಂದೆ ನೋಡದೆ......
****************

14.02.2015
ಪ್ರೇಮಿಗಳ ದಿನಾಚರಣೆ
++++++++++++++
ಅಲ್ಲಾ, ಎಲ್ಲಾ ದಿನಾಚರಣೆಗಳನ್ನು
ಮಾಡಿದ ಹಾಗೆ, ಪ್ರೇಮಿಗಳ
ದಿನಾಚರಣೆಯನ್ನೂ ಮಾಡಿದರೆ
ತಪ್ಪೇನು? ಬೇಕಾದರೆ, ಅದನ್ನು
ಪ್ರೇಮ, ಪ್ರೀತಿಯ ದಿನಾಚರಣೆ
ಎನ್ನೋಣವೇ?
ಎಲ್ಲಾ ಕಥ, ಕಾವ್ಯ,
ಕವನ, ಸಿನೆಮಾಗಳೆಲ್ಲ ಪ್ರೀತಿ,
ಪ್ರೇಮದ ಸುತ್ತಲೇ ಸುತ್ತುತ್ತಿರುವಾಗ
ಒಂದು ದಿನ ಇದನ್ನು ಸಭ್ಯತೆಯ
ಎಲ್ಲೆ ಮೀರದಂತೆ celebrate
ಮಾಡಿದರೆ ತಪ್ಪೇನು?
ಪ್ರೀತಿ, ಪ್ರೇಮಗಳ ದಿನಾಚರಣೆ ಅಂದ
ಕೂಡಲೇ ಅದನ್ನು ಅಶ್ಲೀಲ
ಅನ್ನುವುದಾದರೆ, ತೆರೆಮರೆಯಲ್ಲಿ
ನಡೆಯುವ ಅಸಭ್ಯತೆ, ಅಶ್ಲೀಲತೆಗೆ
ಯಾರು ಕಡಿವಾಣ ಹಾಕುತ್ತಾರೆ?
ಹಿತ ಮಿತವಾಗಿರಲಿ ಎನ್ನುವುದು
ಅಪೇಕ್ಷಣೀಯ, ಆದರೆ ಪೂರ್ತಿ
ನಿಷೇಧ ಸರಿಯಲ್ಲ ಎಂದು ನನ್ನ
ಅನಿಸಿಕೆ. ಸರಿಯೋ ತಪ್ಫೋ
ನೀವೇ ಹೇಳಬೇಕು......
.*********
12.02.2015

Saturday, 7 February 2015

ಕಲೆ..."ಕಲೆ"
ಹೊಂಬಣ್ಣದ ಕಲೆಗೆ
ಮರುಳಾಗಿ
ಕೊರಳುಗಳಿಗೆ ಬಿದ್ದವು
ತೋಳ ಮಾಲೆಗಳು.
ಕಾಲದ ಕಣ್ಣು ಮುಚ್ಚಾಲೆಯಲಿ,
ಕಲೆ ಕಾಲದ
ಹಿಂದೆ ಮರೆಯಾಯ್ತು,
ಬಿರು ಮಾತುಗಳ
ಚಾಬೂಕು
ಬೀಸ ತೊಡಗಿತು,
ರಾಗ ದ್ವೇಷಗಳು
ರಾರಾಜಿಸಿದವು....
ಪ್ರೀತಿ ಒಲುಮೆಯ
ಸೆಲೆ ಬತ್ತಿತು,
ಒರಟು ವಿರಸಗಳೇ
ತುಂಬಿ ಮೆರೆದವು
ಅಂತೂ ಇಂತೂ
ಕೊನೆಗೆ ಕಲೆ
ಕೊಲೆಯಾಗಿ ಹೋಯ್ತು...
ಬರೇ "ಕಲೆ" ಯಷ್ಟೇ
ಉಳಿಯಿತು,
ಎಷ್ಟು ಉಜ್ಜಿ
ತೊಳೆದರೂ, ಇನಿತೂ
ಮಾಸದ ನೋವಿನ "ಕಲೆ"
ನಿರಂತರ ನೋವಿನ "ಕಲೆ".
07.02.2015
ಇತರರ (ಗಂಡ/ಹೆಂಡತಿ ಮತ್ತು ಮಕ್ಕಳೂ ಸೇರಿ)
ಬೇಕು ಬೇಡಗಳು ತಮ್ಮ ಬೇಕು ಬೇಡಗಳಿಗಿಂತ
ಸ್ವಾಭಾವಿಕವಾಗಿಯೇ ಭಿನ್ನವಾಗಿರುತ್ತವೆ ಎಂಬುದನ್ನು
ಎಲ್ಲರೂ ಒಪ್ಪಿಕೊಂಡರೆ, ಪ್ರೀತಿಯ ಸಂಬಂಧಗಳು
ಸದಾ ಹಸಿರಾಗಿರುತ್ತವೆ.
******ದಾರ್ಶನಿಕ.
ಪರದೇಶಕ್ಕೆ ಹೋಗಲು ಬೇಕು
ಪಾಸ್ಪೋರ್ಟ್ ವೀಸಾ ಎಲ್ಲಾ,
ಆದರೆ, ಪರಲೋಕಕ್ಕೆ ಹೋಗಲು
ಇವು ಯಾವುವೂ ಬೇಡ,
ಕಾಲನ ಕರೆಯೊಂದು ಬಂದರೆ ಸಾಕು,
ನಾಲ್ಕು ಜನರಿಗೆ ಹೊರೆಯಾದರೆ ಸಾಕು.
*******ದಾರ್ಶನಿಕ
ಕೆಲವರ ದೃಷ್ಟಿಯಲ್ಲಿ ಸಹಕಾರದ
ಪರಿಭಾಷೆಯೇ ವಿಚಿತ್ರ. ಅವರಿಂದಾಗುವ
ಉಪದ್ರವವನ್ನು ನೀವು ಸಹಿಸಿಕೊಂಡಿದ್ದರೆ
ಅದು ನಿಮ್ಮ ಸಹಕಾರ. ಅದನ್ನು
ನೀವು ವಿರೋಧಿಸಿದರರೆ
ಅದು ನಿಮ್ಮ ಅಸಹಕಾರ.
***** ದಾರ್ಶನಿಕ
ಸುಖದ ಚಿಂತೆ
ದೃಷ್ಟಿ ಮಂಜಾದಾಗ
ಕೈ ಹಿಡಿದು
ಮುನ್ನಡೆಸಿದ ಮಗ,
ಬೆನ್ನು ತಟ್ಟಿ
ತಲೆ ನೇವರಿಸಿ
ಶಸ್ತ್ರ ಚಿಕಿತ್ಸೆಯಲ್ಲೂ
ಸಹಕರಿಸಿ
ಧೈರ್ಯ ತುಂಬಿದ
ನನ್ನ ಪ್ರಿಯ ಬಹು,
ಬೆಳಗ್ಗೆ ಶಾಲೆಗೆ
ಓಡುವ ಅವಸರದಲ್ಲೂ,
ಓಡಿಬಂದು
ಕುತ್ತಿಗೆ ಬಳಸಿ
ಗಲ್ಲಕ್ಕೆ ಮುತ್ತಿಟ್ಟು
Best of luck, ಅಜ್ಜಾ,
ಎಂದುಸಿರಿದ ಮೊಮ್ಮಕ್ಕಳು,
ಮುಂದೆಲ್ಲಾದರು
ನಾನು ಅಂಧನಾದರೂ
ನನಗೆ ನೋಡಲು
ಹಲವು ಜೋಡಿ
ಪ್ರೀತಿಯ ಕಂಗಳಿವೆ
ಹಿಡಿದು ನಡೆಸಲು
ಹಲವು ಜೋಡಿ
ಕೈಗಳವೆ, ಎಂಬ
ಸುಖದ ಚಿಂತೆ
ನನ್ನ ಮೈಮರೆಸಿ
ಸಂತೈಸಿ ಓಲೈಸಿತು.
29.01.2015
ಇನ್ನೊಬ್ಬರಿಗೆ ತಮ್ಮ
ಮಾತಿನಿಂದ ಮಾನಸಿಕ
ಹಿಂಸೆ ಕೊಡುವವರು,
ತಮ್ಮ ಮಾತಿನಿಂದ
ಇನ್ನೊಬ್ಬರಿಗೆ ಹಿಂಸೆಯಾಗುತ್ತಿದೆ
ಎನ್ನುವುದನ್ನು ಎಂದೂ
ಒಪ್ಪಿ ಕೊಳ್ಳುವುದಿಲ್ಲ.
***ದಾರ್ಶನಿಕ
ಎಲ್ಲೋ ಕೇಳಿದ ಜೋಕ್

ಅಪರೂಪಕ್ಕೆ ಅಡಿಗೆ ಮನೆಗೆ ಬಂದ ಗಂಡ ಹೆಂಡತಿಗೆ ಸಹಾಯ ಮಾಡಲು ಹೊರಟ.
ಹಾಲಿನ ಪಾತ್ರೆ ಇಲ್ಲಿ ಇಡು
ಮೊಸರು ಮುಚ್ಚಿ ಇಡು
ಸಾರಿಗೆ ಉಪ್ಪು ಹಾಕು
ಅನ್ನಕ್ಕೆ ನೀರು ಕಡಿಮೆ ಇಡು
.
.
ಹೆಂಡತಿಗೆ ತಲೆ ಕೆಟ್ಟು ಕೂಗಿದಳು
'ನೀವು ನನ್ನ ಕೆಲಸದಲ್ಲಿ ತಲೆ ಹಾಕಬೇಡಿ'
ಗಂಡ ನಗುತ್ತಾ ಹೇಳಿದ
'ನೀನು ನನಗೆ ಸಹಾಯ ಮಾಡಲ್ಲವೆ ಕಾರ್ ಡ್ರೈವ್ ಮಾಡುವಾಗ, ನಿಧಾನಕ್ಕೆ ಹೋಗಿ, ಹಾರ್ನ ಮಾಡಿ ಸಿಗ್ನಲ್ ನೋಡಿ ಬಸ್ ಬಂತು.
ಅಂತೆಲ್ಲ ಹೇಳ್ತಾ ಇರ್ತಿಯಲ್ಲ. ,ಇದು ಹಾಗೆ'
.
********************************
ನಮಸ್ಕಾರ, ಇದು ನೀವು ಜೋಕ್ ಅಂದು ಕೊಂಡರೆ ಜೋಕೆ್. ಅದರೆ,
ನಿಜವಾಗಿ ಹೀಗಂದವರನ್ನು ನೋಡಿದವರಿದ್ದಾರೆ
ಇದೊಂದು ಕೌಟುಂಬಿಕ ವಿಕೃತಿ. ಕೌಟುಂಬಿಕ ಸುಖ ಜೀವನದ
ಅವನತಿಯನ್ನೇ, ಜೀವನದ ಸುಖ ಸಂತೋಷವೆಂದು ತಿಳಿದು ಕೊಂಡಿರುವವರ
ಮಾನಸಿಕ ದುಸ್ಥಿತಿ, ಮತ್ತು ಸಜ್ಜನಿಕೆಯ ದಿವಾಳಿತನ.....

***********************************************
ಮದುವೆ ದಲ್ಲಾಳಿ :- ನಿಮ್ಮ ಹುಡುಗಿಗೆ ಎಂಥ ಹುಡುಗ ಬೇಕೆಂಬುದು ನಿಮ್ಮ ಅಪೇಕ್ಷೆ?
ಹುಡುಗಿಯ ತಾಯಿ:- ಹುಡುಗ ಸುಂದರನಾಗಿರಬೇಕು,ಒಳ್ಳೆಯ ಕೆಲಸದಲ್ಲಿರಬೇಕು,
ಯಾವ ದುಶ್ಚಟಗಳೂ ಇರಬಾರದು, ಇರಲು ಸ್ಡಂತ ಮನೆ
ಇರಬೇಕು, ಓಡಾಡಲು ಕಾರಿರಬೇಕು, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ
ಹುಡುಗಿಯ ಅತ್ತೆ ಮಾವ ಆಗುವವರು ಗೋಡೆಯ ಮೇಲಿರಬೇಕು. !!!!!
+++++++++
ನೋಡಿ ಸ್ವಾಮಿ, ಹೀಗೂ ಉಂಟು.......... smile emoticon
ವಿರಹ
++++
ನಗುವಿನ ಅಲೆ ಮೇಲೆ ಒಮ್ಮೆ ತೇಲಿಸಿದ ನೀನು
ಈಗ ಅಳುವಿನ ಮಡುವಿನಲಿ ಗಿರ್ಕಿ ಹೊಡೆಸಿ
ಮುಳುಗಿಸಿದಿಯಲ್ಲಾ, ಏಕೆ ಈ ಕ್ರೌರ್ಯ?
ಜೀವನ ಪೂರ್ತಿ ಆಸರೆಯಾಗಬೇಕಿದ್ದ ನೀನು,
ತೊರೆದು ನೂಕಿದೆಯಲ್ಲ ಈಗ ನನ್ನ ಕತ್ತಲ ಕೂಪಕ್ಕೆ
ಅಯ್ಯೋ ದೇವರೇ, ಸಹಿಸಲಾರೆ ನಾ ಈ ವಿಯೋಗವ
ಕಂಡಿದ್ದ ಕನಸುಗಳು ನೂರು, ಆದರೆ ನನಸಾದದ್ದು ಶೂನ್ಯ,
ಶಾಲೆಯಿಂದ ಬಂದ ಮಗುವೀಗ ಕೇಳುತ್ತಿದೆ
'ಎಲ್ಲರಿಗೂ ಅಪ್ಪ ಇದ್ದಾರೆ ನನ್ನ ಅಪ್ಪ ಎಲ್ಲಮ್ಮಾ 'ಎಂದು,
ಕಾಲನ ಕರೆ ನಿನಗಷ್ಟೇ ಏಕೆ ಬಂತು ಹೇಳು,
ನಮ್ಮಿರುವನ್ನೇ ಮರೆಯಿತೇ ಈ ಕ್ರೂರಿ ಕಾಲ
ನನ್ನ, ನನ್ನ ಕಂದನ ಮಾಡಿತಲ್ಲಾ ಅನಾಥ,
ಈ ಅಪೂರ್ಣ ಬದುಕು ಬದುಕಲಾರದ ನಾನು
ಸುಮ್ಮನೇ ಇರಬೇಕು ಭೂಮಿಯ ಮೇಲೆ
ಈ ನಿನ್ನ ಕಂದನಿಗಾಗಿ, ಈ ನಿನ್ನ ಕುರುಹಿಗಾಗಿ
***********
25.01.2015
ಬಾಳು ಹಸನಾಗಲಿ.
+++++++++++
ಮನದಾಳದಲ್ಲಿ
ಮಲ್ಲಿಗೆ ಅರಳಿತು,
ಕಂಪು ವಾಸನೆ
ಎಲ್ಲೆಡೆ ಪಸರಿಸಿತು....
ಶುಭ್ರ ವರ್ಣ
ಸುಂದರ ವದನ
ಹೊಳೆದು ಮಿಂಚಿ
ಕಣ್ಣು ಮಿಟುಕಿಸಿತು
ದಿನವಿಡೀ ಉರಿದ
ರವಿ ತಳಿದ
ಹೊಂಬಣ್ಣ ಸಂಜೆಯ
ಕಡಲಲಿ ಕರಗಿತು.
ಕೆನ್ನೀರಾದ ಕಡಲು
ದಿಗಂತದುದ್ದಕ್ಕೂ
ಹರಡಿತು, ದಾಟಿತು
ಮುಗಿಲಂಚಿನು
ಮನದ ಮಲ್ಲಿಗೆ
ನಾಚಿ ಕೆಂಪೇರಿತು
ಇಣುಕಿ ನಗುವ
ಚಂದಿರನ ಕಂಡು,
ನಸು ನಕ್ಕರಿಬ್ಬರೂ
ಸನಿಹ ಸನಿಹಕೆ ಬಂದು
ಜೋಡಿ ಕಣ್ಣುಗಳು
ಕಲೆತವು ಸವಿಯಲಿ
ಭುವಿಯು ಹಸಿರಾಗಲಿ
ಬಾಳು ಹಸನಾಗಲಿ
ಮಲ್ಲಿಗೆ ಮುಡಿಯೇರಿ
ನಲಿಯಲಿ ಹರುಷದಲಿ.
********
25.01.2015