Saturday, 14 February 2015

ಸ್ವರ್ಗ ಸುಖ ... frown emoticon
***************
ಮಾತಾಡಿದರೆ ಎಗರಿಬೀಳುವ
ಮಂಗೋಪಿ ಕುಡುಕ ಮಗ,
ಏನಿಲ್ಲದಿದ್ದರೂ ನಾನೆ
ಈ ಜಗದ ರಂಭೆ ಎಂದು
ಜಗತ್ತನ್ನೇ ಧಿಕ್ಕರಿಸಿ
ಮೆರೆಯುವ ಅಹಂಕಾರಿ ಸೊಸೆ,
ಬಿಸಿನೆಸ್ ಮಾಡುತ್ತೇನೆಂದು
ಶೇರ್ ಮಾರ್ಕೆಟ್ ನಲ್ಲಿ
ಎಲ್ಲಾ ಕಳೆದುಕೊಂಡು
ಮನೆ ಮಠ ಮಾರಿಕೊಂಡು
ಮನೆ ಅಳಿಯನಾಗಿರುವ
ಮೊದಲನೇ ಮಗಳ ಗಂಡ
ಗಂಡನ ಮನೆಯಲ್ಲಿ
ಕೆಂಡ ಕಾರಿ, ತಲೆ ಮಂಡೆ
ಹಿಡಿಸಿ ಹಾಕಿ, ಅಲ್ಲಿಂದ
ಗಡಿಪಾರಾಗಿ, ಇಲ್ಲೇ
ಮಕ್ಕಳೋಂದಿಗೆ ಠಿಕಾಣಿ
ಹೂಡಿ, ದಿನಾ ಜಗಳ ಕಾಯುವ
ಎರಡನೇ ಮಗಳು,
ಮೊದಲು, ನನಗೆ ಅಂಥವ
ಬೇಕು ಇಂಥವ ಬೇಕು
ಅವ ಬೇಡ. ಇವ ಬೇಡ ಎಂದು,
ನಂತರ ಯಾರೂ ಬರದೆ
ಮದುವೆಯಾಗದೆ ಮನೆಯಲ್ಲುಳಿದು
ಅದಕ್ಕೆ ಎಲ್ಲರನ್ನೂ ಶಪಿಸುತ್ತಿರುವ
ಕೊನೆಯ ಮುದ್ದಿನ ಮಗಳು,
ಯಾವಾಗಲೂ ಹೊಡೆದಾಟವೇ
ನಮ್ಮ ಆಟ ಎಂದು ಕೊಂಡು
ಇದು ಮನೆಯಲ್ಲ, ರಣರಂಗ
ಎಂದು ನೆನಪುಮಾಡಿಸುತ್ತ
ಸದಾ ಹೋರಾಡುವ
ಅರ್ಧ ಡಜನ್ ಮೊಮ್ಮಕ್ಕಳು,
ಎಲ್ಲರಿಗಿಂತ ಹೆಚ್ಚಾಗಿ,
ಎಲ್ಲಾ ಅನಿಷ್ಟಗಳಿಗೆ
ನೀವೇ ಶನೀಶ್ವರ ಹೊಣೆಯೆಂದು
ದಿನದ 24 ತಾಸು ಇವನೊಡನೆ
ಜಗಳವಾಡುತ್ತಲೇ ಇರುವ
ಮುದಿ ಹರೆಯದ ಏಕೈಕ ಹೆಂಡತಿ.
ಓಹ್, ಈ ಎಲ್ಲಾ ಸುಖಗಳ ಮುಂದೆ
ಇನ್ನ್ಯಾವುದಿದೆ ಸ್ವರ್ಗ ಸುಖ ?
ಆ ಸ್ವರ್ಗಕ್ಕೇ ಕಿಚ್ಚು
ಹಚ್ಚಿ ಬರುವೆ ಸರ್ವಜ್ಞ,
ಎಂದು ಮುದುಕ
ನಢೆದೇ ಬಿಟ್ಟ ಹಿಂದೆ ನೋಡದೆ......
****************

14.02.2015