Saturday 1 November 2014

ಕಾಲವನ್ನು ಕಾಯುತ್ತಾ....
ಒತ್ತಡ ಅನ್ನಿಸುತ್ತಾ ಇದೆ ಅವನಿಗೆ,
ಸಂತೈಸಿ ಬದುಕೆಂದು ಅದರಿಸುವವರಿಲ್ಲ
ಬೀದಿಯ ಕಸವಾದ,
ಆದರೂ ಅದನ್ನೂ ಗುಡಿಸಿ ಹಾಕುವವರಿಲ್ಲ,
ಗಾಳಿಗೆ ಸಿಲುಕಿದ ತರಗಲೆ ಆದ.
ಗಾಳಿಗೂ ಬೇಜಾರು, ಅವನನ್ನೊಯ್ಯಲಿಲ್ಲ,
"ನನ್ನ ಓರಗೆಯವರೆಲ್ಲ ಒಬ್ಬೊಬ್ಬರಾಗಿ ಮರೆಯಾಗುತಿದ್ದಾರೆ,"
ಎಂದು ಹೆಂಡತಿಗಂದ,
"ಆಯುಸ್ಸು ಮುಗಿದವರು ಸಾಯುತ್ತಾರೆ,ಅದಕ್ಕೇನು ಮಾಡುವುದು?"
ಎಂದ ಹೆಂಡತಿಯ ಮುಖ ನೋಡಿ ದಂಗಾದ.
ನಿಜವೇ ಆದರೂ, ಒಂದು ಸಾಂತ್ವನದ ಮಾತಿಲ್ಲವಲ್ಲ ಎಂದುಕೊಂಡು ಬೇಜಾರಾದ.
ವಯಸ್ಸಾದ ನಂತರ ಆತ್ಮೀಯರೆನಿಸಿ ಕೊಂಡವರೂ ಎಷ್ಟು practical ಆಗುತ್ತಾರಲ್ಲಾ
ಎಂದು ಅಚ್ಚರಿ ಪಟ್ಟು ಕೊಂಡು ಪೆಚ್ಚು ಮುಖ ಹಾಕಿ ಕೊಂಡ,
"ಪ್ರಪಂಚವೇ ಹಾಗಲ್ಲವೇ" ಎಂದುಕೊಂಡು ಸಮಾಧಾನವೂ ಪಟ್ಟು ಕೊಂಡ...
ಕಾಲವನ್ನು, ಸಾವನ್ನು ತಡೆಯುವವರಿಲ್ಲ,
ಆದರೆ ಒತ್ತಾಯದ ಬರವಿಲ್ಲ......
ಬರಬಾರದೇ ಎಂದರೂ ಬರದು, ಬರ ಬೇಡ ಎಂದರೂ ಬಾರದೆ ಇರದು,
ಕಾಯುತ್ತಲಿರ ಬೇಕು ಅವರವರ ಕಾಲಕ್ಕಾಗಿ,
ಮುಂದೊಂದು ದಿನ ಬರಲಿದೆ, ಆ ಅಳಿಗಾಲ.
**********************
25.10.2014

No comments:

Post a Comment