Monday 1 May 2017

ಅಂಗಳದಲ್ಲಿ
ತಲೆ ನೇವರಿಸಿ
ಮೈದಡವುತ್ತದ್ದ
ಅಮ್ಮನ ತೊಡೆ
ಮೇಲೆ ಮಲಗಿ
ಆಕಾಶ ದಿಟ್ಟಿಸುತ್ತಿದ್ದೆ..

"ಅಮ್ಮಾ, ಸತ್ತವರು
ಆಕಾಶದಲ್ಲಿ ನಕ್ಷತ್ರಗಳಾಗಿ
ಮಿನುಗುತ್ತಾರಂತೆ
ಹೌದೇನಮ್ಮಾ...:-)
ನಾನೂ ಹಾಗೇ
ಮಿನುಗುವವನೇ,
ಅಲ್ಲವೇನಮ್ಮ?"

ಉತ್ತರವಾಗಿ ಅಮ್ಮ
ಎರಡು ಕಣ್ಣೀರ ಹನಿಗಳು
ನನ್ನ ಮುಖದ ಮೇಲೆ ಬಿದ್ದವು,

ಬೆಚ್ಚಿ, ಮೇಲೆ ನೋಡಿದಾಗ
ಕಂಡದ್ದು ಅಮ್ಮನ,
ನನ್ನಮ್ಮನ ಕಣ್ಣೀರು
ತುಂಬಿದ ಮುಖ...

ನನ್ನ ಮುಖದ ಮೇಲಿನ
ತನ್ನದೇ ಕಣ್ಣೀರನ್ನು
ತಾನೇ ಒರೆಸಿ, ಅಮ್ಮ ಅಂದಳು

ಮಗೂ, ನೀನೇಕೆ ಅಲ್ಲಿ,
ನೀನಿಲ್ಲೇ ಸುಖವಾಗಿರುವೆ.
ಅಂದರೂ ಅವಳ ಕಣ್ಣೀರ ಮಳೆ
ನನ್ನ ಮುಖ ತೋಯಿಸಿತು...

ಅಮ್ಮಾ, ನನ್ನಮ್ಮಾ,
ಅಳಬೇಡಮ್ಮಾ, ನನ್ನ
ಕೃಶವಾದ ಕೈಗಳು
ಕಷ್ಟದಲ್ಲಿ ಮೇಲೆದ್ದು
ಅಮ್ಮನ ಕಣ್ಣೀರೊರಸಿದವು.

ಅಮ್ಮಾ, ನನಗೆಲ್ಲ ಗೊತ್ತು,
ನಾನಿಲ್ಲಿ ಕೆಲ ದಿನಗಳ ಅತಿಥಿ,
ನನ್ನ ರಕ್ತದ ಕ್ಯಾನ್ಸರ್
ಎಂದೂ ಗುಣ ಕಾಣದೆಂದು....

ಆದರೆ, ಅದೋ ನೋಡು
ನಕ್ಷತ್ರವೊಂದು
ಭೂಮಿಗೆ ಉರುಳಿತು.
ಅದು ಭೂಮಿಗೆ ಮರಳಿ
ಬರುತ್ತಿರುವ ಆತ್ಮವಂತೆ...

ಚಿಂತಿಸ ಬೇಡ ನನ್ನಮ್ಮಾ,
ನಾನಲ್ಲಿ ಕೆಲ ದಿನ ಕಳೆದು,
ಹೀಗೇನೇ ಭುವಿಗುರುಳಿ,
ನಿನ್ನುದರದಲ್ಲೇ ಮರಳಿ
ಜನಿಸಿ, ನಿನ್ನ ಮಡಿಲು
ಖಂಡಿತಾ ತುಂಬುವೆನಮ್ಮಾ...

ಕಣ್ಣೀರ ಮಳೆಯನ್ನೇ
ಸುರಿಸಿದ ಆ ತಾಯಿ,
ನನ್ನನ್ನು ಹಿಡಿದೆತ್ತಿ
ಎದೆಗವಚಿಕೊಂಡಾಗ,]
ನಾನು ನಭದ ನಕ್ಷತ್ರಗಳಲ್ಲಿ
ಒಂದಾಗಿಯಾಗಿತ್ತು
ಒಂದಾಗಿಯಾಗಿತ್ತು.... :-(
******************

೦೧.೦೫.೨೦೧೭.

No comments:

Post a Comment