Friday 24 October 2014

ಮಮತೆ - ಶಾಂತಿ.

ಅವನು ಬಾಬಾನ ಹತ್ತಿರ
ಸಲಹೆ ಕೇಳಲು ಹೋದ,
"ಮನೆಯಲ್ಲೂ ಶಾಂತಿ ಇಲ್ಲ,
ಶಾಂತಿ ಹುಡುಕಿಕೊಂಡು
ಹೊರಬಂದರೆ, ಹೊರಗೂ
ಶಾಂತಿ ಎಲ್ಲೂ ಕಾಣ್ತಾನೇ ಇಲ್ಲ.
ಎಲ್ಲದರಲ್ಲೂ ನಿರುತ್ಸಾಹ,
ಸಂಶಯ, ಕಾಣದ ಭಯ,
ರಾತ್ರಿ ನಿದ್ರೆ ಬರೊಲ್ಲ,
ಊಟ ರುಚಿಸೊಲ್ಲ, ಉಂಡರೂ
ಜೀರ್ಣನೇ ಆಗೋದಿಲ್ಲ,
ಯಾರೂ ಬೇಡ, ಯಾವುದೂ ಬೇಡ
ಎಂದು ಸದಾ ಕಾಡುವ ಆತಂಕ,
ಬಾಬಾ, ಏನಾದರೂ ಮಾಡು,
ನನ್ನ ಕಷ್ಟ ಹೋಗಲಾಡಿಸು,
ನನ್ನನ್ನು ಜೀವನ್ಮುಖಿ ಮಾಡು"
ಎಂದು ಅಂಗಲಾಚಿ ಬೇಡಿಕೊಂಡ.
ಬಾಬಾ ಕಣ್ಮುಚ್ಚಿ ಮೇಲೆ ನೋಡಿದರು,
ಒಂದು ಕಿವಿಗೆ ಕೈಹಿಡಿದು ಮೇಲಿಂದ
ಏನೋ ಅವರಿಗಷ್ಟೇ ಕೇಳುವ
ಅಶರೀರವಾಣಿ ಅಲಿಸಿದಂತೆ
ಮುಖ ಮಾಡಿ ಹೇಳಿದರು,
"ಭಕ್ತಾ, ಹಿಮಾಲಯಕ್ಕೆ ಹೋಗಿ
ಒಂದು ತಿಂಗಳು ಒಂಟಿಕಾಲಲ್ಲಿ ನಿಂತು
ತಪಸ್ಸು ಮಾಡಿ ಬಾ, ಎಲ್ಲಾ ಸರಿ ಹೋಗುತ್ತೆ"
ಹೊರಟೇ ಬಿಟ್ಟ, ಕಾಷಾಯ ವಸ್ತ್ರಧರಿಸಿ,
ಹೆಗಲಿಗೊಂದು ಜೋಳಿಗೆ ಚೀಲ ಇಳಿಬಿಟ್ಟು,
ಹಿಮಾಲಯದ ತಪ್ಪಲಲ್ಲಿ ನಿಂತು ಮೇಲೆ
ದಿಟ್ಟಿಸಿದ, ದೃಷ್ಟಿಗಟುಕದ ಹಿಮಾಲಯ ಶಿಖರ.
ಮತ್ತೆ ಕಾಡಿತು ಸಂಶಯ, ಬಾಬಾ ಹೇಳಿದ
ಈ ಗಿರಿ ಶಿಖರ ಏರಲು ಸಾಧ್ಯವೇ, ಇಲ್ಲವೇ ಇಲ್ಲ,
ಭ್ರಮ ನಿರಸನವಾಯ್ತು, ಹಿಂತಿರುಗಿದ.
ಮನೆಯಲ್ಲಿ ಕಾದಿದ್ದಳು ಮಡದಿ ಗಾಬರಿಯಾಗಿ,
ಬಾಬಾ ಹಿಮಾಲಯಕ್ಕೆ ತಪಕ್ಕೆ ಕಳಿಸಿದರೆಂದ,
"ನಾನಿರಲು ನಿಮಗೇಕೆ, ಹಿಮಾಲಯದ ಭ್ರಮೆ,
ಎಂದು ತಲೆ ಎದೆಗಾನಿಸಿ, ನೇವರಿಸಿದಳು.
ಭ್ರಮೆಯ ಬಿಡಿ, ನಾನೇ ನಿಮ್ಮ ಹಿಮಾಲಯ,
ಸುಖಿಸಿ ಬಾಳುವ ತೃಪ್ತಿಯ ಬದುಕೇ ಶಾಂತಿ,"
ಹೌದೆನಿಸಿತವನಿಗೆ, ಮನೆಯಲ್ಲಿ ಶಾಂತಿ
ಮಡದಿಯ ಮಮತೆ ಇಲ್ಲಿರುವಾಗ ಮತ್ತೆಲ್ಲಿ
ಏನ ಹುಡುಕಲಿ ಎಂದು ಎಂದು
ಮಡಿದಿಯ ಕಣ್ಣುಗಳನ್ನು ದಿಟ್ಟಿಸಿ ನಸು ನಕ್ಕ.
************
20.10.2014

No comments:

Post a Comment