Saturday, 26 December 2015

ಇಂದಿನ "ವಿಜಯವಾಣಿ" ಯಲ್ಲಿ "ಗರಮಾ ಗರಮ್" ಅಂಕಣದಲ್ಲಿ ಪ್ರಕಟಿತ ನಗೆ ಬರಹ.
ಒಂಥರಾ ಚೆನ್ನಾಗಿದೆ. ಈ ವರೆಗೆ ಓದಿರದವರು ಓದಿ.....ನಗು ಬಂದರೆ ನಕ್ಕು ಬಿಡಿ... smile emoticon ಇದರಲ್ಲೊಂದು
ನೀತಿ ವಾಕ್ಯನೂ ಇದೆ, last but one ಪ್ಯಾರಾದಲ್ಲಿ... ಚೆನ್ನಾಗಿದೆ.
***********************************************************************************
ಪ್ರಾಚೀನಕ್ಕೂ ಪ್ರಸ್ತುತಕ್ಕೂ ಲಿಂಕ್!
____________________
20 Sep 2015
ರಾಮಾಯಣ ಮತ್ತು ಮಹಾಭಾರತ ಕಾಲ್ಪನಿಕ ಕೃತಿಗಳಲ್ಲ, ಅವಕ್ಕೆ ಆಧಾರಗಳಿವೆ ಎಂದು ಒಂದು ಅಧ್ಯಯನ ಸಂಸ್ಥೆ ನುಡಿದಿದೆ. ಕೃತಿ ಕಾಲ್ಪನಿಕವೋ ಅಲ್ಲವೋ, ಕೃತ್ಯಗಳಂತೂ ಇಂದಿಗೂ ಗೋಚರಿಸುತ್ತಲೇ ಇವೆ. ರಾಮಾಯಣದಲ್ಲೇ ಎಷ್ಟೊಂದು ಪ್ರಥಮಗಳು!
ಪ್ರಪಂಚದ ಮೊಟ್ಟಮೊದಲ ಲಾಫ್ಟ್ರ್ ಕ್ಲಬ್ ಆರಂಭಿಸಿದ್ದೇ ರಾಕ್ಷಸರು, ರಾವಣನೇ ಅದರ ಅಧ್ಯಕ್ಷ ಎಂದರೊಬ್ಬ ಗುದ್ದುಜೀವಿ. ಅದು ಹೇಗೆ ಹೇಳುವಿರಿ ಎಂದರೆ, ನೋಡ್ರೀ, ಯಾವುದೇ ರಾಕ್ಷಸ ತನ್ನಷ್ಟಕ್ಕೆ ತಾನೇ ಸತ್ತ ದಾಖಲೆಯೇ ಇಲ್ಲ. ಯಾರಾದರೂ ಬಂದು ಕೊಲ್ಲುವವರೆಗೆ ಜೀವಂತವಾಗಿರುತ್ತಿದ್ದ ರಕ್ಕಸರು ತುಂಬು ಆರೋಗ್ಯದಿಂದಲೇ ಇರುತ್ತಿದ್ದರು. ಯಾವುದೇ ರಕ್ಕಸ ನೆಗಡಿ, ತಲೆನೋವು, ಸಿಡುಬು, - ಎಂದೆಲ್ಲ ಮಲಗಿದ, ಮುಳುಗಿದ ದಾಖಲೆಯೇ ಇಲ್ಲ. ಅವರ ಅಟ್ಟಹಾಸದ ನಗೆಯೇ ಅವರ ಅದ್ಭುತ ಆರೋಗ್ಯಕ್ಕೆ ಕಾರಣ. ‘ಲಾಫ್ಟವರ್ ಈಸ್ ದ ಬೆಸ್ಟ್ ಮೆಡಿಸನ್’ ಎನ್ನುವುದನ್ನು ಕಂಡುಹಿಡಿದದ್ದೇ ರಕ್ಕಸರು.
ಆ ತತ್ವ ಇಂದಿಗೂ ಪ್ರಸ್ತುತ ಎನ್ನುವುದಕ್ಕೆ ಪಾರ್ಕ್‌ಗಳಲ್ಲಿ ಹ್ಹಹ್ಹಹ್ಹಹ್ಹ ಎಂದು ಅಟ್ಟಹಾಸ ಮಾಡುತ್ತ ಆರೋಗ್ಯದಿಂದಿರುವವರೇ ಸಾಕ್ಷಿ.
ದೇವತೆಗಳದು ಸೌಂಡ್ ‘ಲಾಫ್ಟುರ್, ಇವರದು ಸೌಂಡ್ ಆಫ್ ‘ಲಾಫ್ಟಹರ್. ಹೀಗೆ ನಗುತ್ತಿದ್ದ ರಾಕ್ಷಸರನ್ನೆಲ್ಲ ಮೊದಲು ಒಂದುಗೂಡಿಸಿದ್ದು ರಾವಣ. ಆದ್ದರಿಂದ ಆತನೇ ಮೊದಲ ‘ಲಾಫ್ಟಕರ್ ಕ್ಲಬ್ ಪ್ರೆಸಿಡೆಂಟ್. ಅಲ್ಲದೆ ಲೈನ್ ಆಫ್ ಕಂಟ್ರೋಲ್ ದಾಟಲು ಪ್ರೇರೇಪಿಸಿ ದಾಳಿ ಮಾಡುವಂಥ ಪಾಕಿಸ್ತಾನದ ಬುದ್ಧಿಗೆ ರಾವಣ ಲಕ್ಷ್ಮಣರೇಖೆಯನ್ನು ದಾಟಿಸಿ ಸೀತೆ ಮೇಲೆ ದಾಳಿ ಮಾಡಿದುದೇ ಬುನಾದಿ.
ರಾವಣ ಪ್ರಪಂಚದ ಮೊಟ್ಟಮೊದಲ ಕಿಡ್ನಾಪರ್ ಎಂದೆಲ್ಲ ನುಡಿದರು.
ಚುನಾವಣೆ ಸಮಯದಲ್ಲಿ ಒಂದು ದಿನ ಎದ್ದಿದ್ದು ನಂತರದ ಎಲ್ಲ ದಿನಗಳನ್ನು ನಿದ್ರೆಯಲ್ಲೇ ಕಳೆಯುವುದಕ್ಕೂ ರಾಮಾಯಣದ ಕುಂಭಕರ್ಣನೇ ಮೂಲವಂತೆ.
ರಾಜಕಾರಣದ ವಿಷಯದಲ್ಲೂ ರಾಮಾಯಣದ ಹಲವಾರು ವಿಷಯಗಳು ಸೂಪರ್ ಅಂತೆ. ಗೆಲ್ಲುವ ಪಕ್ಷ ಯಾವುದೆಂದು ಮೊದಲೇ ಅರಿತು ವಿಭೀಷಣ ರಾಮನ ಪಕ್ಷಕ್ಕೆ ಬಂದನಂತೆ. ಆದ್ದರಿಂದ ವಿಭೀಷಣನೇ ಪ್ರಪಂಚದ ಮೊಟ್ಟಮೊದಲ ಭಿನ್ನಮತೀಯನಂತೆ! ಇವೆಲ್ಲವೂ ನಿಜದಂತೆ ಕಾಣುವ ಸುಳ್ಳುಗಳೋ, ಸುಳ್ಳಿನಂತೆ ಕಾಣುವ ನಿಜಗಳೋ?
ಈ ಜಿಜ್ಞಾಸೆಯೇ ಅಪ್ರಸ್ತುತ. ಕೃತಿಗಿಂತ ಪಾತ್ರಗಳು ಹಿರಿದಾದಾಗ ದೇವನಿಗಿಂತ ದೈವತ್ವ ಪ್ರಮುಖವಾಗುತ್ತದೆ. ಅದೇ ಬದುಕಿನ ತಿರುಳು, ಮಾರ್ಗ, ಗುರಿ.
ಲಾಸ್ಟ್‌ಲೈನ್: ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗ ವರ್ಗಾವಣೆ ಬೇಡ ಎಂದಿದೆ ಹೈಕೋರ್ಟ್. ವೆರಿಗುಡ್.ಹೊಸಹೊಸ ಡಯಾಬಿಟಿಸ್, ಬಿಪಿ ಡಾಕ್ಟರ್‌ಗಳನ್ನು ಹುಡುಕಿ ಅವಸ್ಥೆ ಪಡುವುದು ತಪ್ಪಿದಂತಾಯಿತು.
***********************************************************************************

No comments:

Post a Comment