Saturday, 28 June 2014

ಮಡಿ - ಮೈಲಿಗೆ.
ಮಡಿ, ಮಡಿ, ಮಡಿಯೆಂದು ನೂರು ಅಡಿ
ಏಕೆ ಹಾರುವಿಯೆಂದು, ಯಾರೋ
ಸಂತರು ಕೇಳಿದ್ದಾರೆ.
ಬೇರೆಯವರು ಮುಟ್ಟಿದರೆ
ಮಡಿ ಹೋಗುತ್ತದೆ, ಮೈಲಿಗೆ ಆಗುತ್ತೆ
ಅನ್ನುವ ಕಲ್ಪನೆ ನೋಡಿ ನಗು ಬರುತ್ತೆ.
ಮುಟ್ಟಿದ ಕೂಡಲೇ ಮೈಲಿಗೆಯಾಗಲು
ಮೈಲಿಗೆಯೇನು ಕರೆಂಟೇ?
ಅಲ್ಲಾ, ಮೈಲಿಗೆಯವರು ಮಡಿಯವ್ರನ್ನು,
ಮುಟ್ಟಿದರೆ ಮಡಿಯವರು ಮೈಲಿಗೆಯಾಗುತ್ತರಂತೆ,
ಹಾಗಾದರೆ ಮಡಿಯವರು ಮೈಲಿಗೆಯವರನ್ನು
ಮುಟ್ಟಿದರೆ ಮೈಲಿಗೆಯವರು ಮಡಿಯಾಗ ಬಾರದೇಕೆ?
ಇದು ನನ್ನನ್ನು ಬಾಲ್ಯದಿಂದಲೂ ಕಾಡುತಿದ್ದ ಪ್ರಶ್ನೆ.
ನನ್ನ ಬಾಲ್ಯದಲ್ಲಿ, ಅಂದರೆ, 1950, 1960ರ
ದಶಕಗಳಲ್ಲಿ, ಈ ಮಡಿ ಮೈಲಿಗೆಯ ಪ್ರಾಮುಖ್ಯತೆ ವಿಪರೀತವಾಗಿತ್ತು.
ನಂತರದ ದಿನಗಳಲ್ಲಿ, ಇದು ಕಡಿಮೆಯಾದರೂ,
ಈಗಲೂ ಸಹ ಈ ಮಡಿ ಮೈಲಿಗೆಯ
ಹಾವಳಿಯನ್ನು, ದೇವಸ್ಥಾನಗಳಲ್ಲಿ, ಮಠಗಳಲ್ಲಿ ಕಾಣಬಹುದು.
ಸ್ವಾಮಿಗಳು ಬರುವಾಗ, ಅವರ ಸುತ್ತಲಿನ
ಪರಿಚಾರಕರು, "ದಾರಿ ಬಿಡಿ, ದಾರಿ ಬಿಡಿ,
ಸ್ವಾಮಿಗಳು ಬರುತಿದ್ದಾರೆ,ಮೈಲಿಗೆ ಆಗುತ್ತೆ"
ಎಂದು ಕೂಗುತ್ತಿರುವುದನ್ನು ನಾವು ಕಾಣುತ್ತೇವೆ.
ಮುಟ್ಟಿದರೆ ಮೈಲಿಗೆಯೆಂಬ ಸಿದ್ಧಾಂತ ಎಂದೆಂದಿಗೂ ಮಿಥ್ಯವೇ.
ನನ್ನ ದೃಷ್ಟಿಯಲ್ಲಿ "ಶುಚಿ" ಯೆ ಮಡಿ, "ಅಶುಚಿ" ಯೆ ಮೈಲಿಗೆ,
ಬಾಕಿ ಆಚರಣೆಗಳು ಬರೀ ಕಂದಾಚಾರ ಮಾತ್ರ.
*********
28.06.2014

Friday, 27 June 2014

ಮಕ್ಕಳ ಸಂತೋಷ 

ಇದೇನು silly ಅಂತೀರಾ? ಹೌದು ನಾವು ದೊಡ್ಡವರ ದೃಷ್ಟಿಯಲ್ಲಿ ಸಿಲ್ಲೀನೆ. ಆದರೆ ಮಕ್ಕಳ ದೃಷ್ಟಿಯಲ್ಲಿ ಅಲ್ಲ.
ಹೇಗೆ ಅಂತೀರಾ? ನನ್ನ ನಾಲ್ಕುವರೆ ವರ್ಷದ ಚಿಕ್ಕ ಮೊಮ್ಮಗನಿಗೆ, ಹಿಂದುಗಡೆ ಎರಡೂ ಬದಿಗೆ supporting
wheels ಇರುವ ಒಂದು ಸೈಕಲ್ ಕೊಡಿಸಿದ್ದೆವು. ಅವನಿಗೆ ಬಹು ಬೇಗ cycling balance ಬಂದು, supporting wheels ತೆಗೆಸಿದೆವು. ಆದರೆ ಸೈಕಲ್ ನಿಲ್ಲಿಸುವುದು ಹೇಗೆ? ಅದಕ್ಕೊಂದು stand ಹಚ್ಚಿ ಕೊಡೆಂದು, ಅವನ cycle garrage uncle ಗೆ ಗಂಟು ಬಿದ್ದ. ಅಷ್ಟು ಚಿಕ್ಕ cycle ಗೆ stand ಸಿಗೊಲ್ಲವೆಂದು ಅಂಗಡಿಯವ. ಆದರೆ ಇವ ಕೇಳಲಿಲ್ಲ.
ಕೊನೆಗೆ, ಇಡೀ ಹುಬ್ಬಳ್ಳಿ ಜಾಲಾಡಿ, ಇವನ cycle ಗೆ ಸರಿ ಹೊಂದುವ ಒಂದು stand ತಂದು ಕೂಡಿಸಿಕೊಟ್ಟ, garrage uncle.

ಆಗ ಇವನ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಆ ಖುಶಿ ಅವನ ಮುದ್ದು ಮುಖದಲ್ಲಿ ತುಂಬಿ ತುಳಕುತ್ತಿತ್ತು. ಅವನ ಸ್ನೇಹಿತರಿಗೆ ಹೇಳಿಕೊಂಡು ಕುಣಿದ. ಅಲ್ಲದೆ, ನನ್ನ ಮೊಬೈಲ್
ತೆಗೆದುಕೊಂಡು ಈ ಫೋಟೋ ತಗೆದ.

ಚಿಕ್ಕ, ಮುಗ್ದ ಹಾಗು ರಾಗ ದ್ವೇಷಗಳಿಲ್ಲದ ಮಕ್ಕಳನ್ನು ತೃಪ್ತಿಗೊಳಿಸಲು, ಸಂತೋಷಗೊಳಸಲು ಅವರ ಅತಿ ಚಿಕ್ಕ ಆಸೆಗಳನ್ನು ಪೂರೈಸಿದರೆ ಸಾಕು. ಆದರೆ ದೊಡ್ಡವರನ್ನು ಸಂತೋಷಗೊಳಿಸುವುದು, ತೃಪ್ತಿಗೊಳಿಸುವುದು ಬಹಳ ಬಹಳ
ಕಷ್ಟದ ಕೆಲಸ. ಅವರ ಅತಿ ದೊಡ್ಡ ಆಸೆಗಳು ಪೂರೈಸಿದರೂ
ಅವರಿಗೆ ಈ ರೀತಿ ಖುಶಿಯಾಗುವುದಿಲ್ಲ.

ಈ ವಿಷಯ ಸ್ನೇಹಿತರೊಡನೆ ಹಂಚಿಕೊಳ್ಲುವ ಅನಿಸಿತು. Boring ಅನ್ಮಿಸಿದ್ದರೆ, ಕ್ಷಮೆ ಇರಲಿ.
ಕಾಲಿಲ್ಲದ ಮಂಚ

ಐದು ಕಾಲಿನ ಮಂಚ
ಕುಂಟ ಮಲಗ್ಯಾನೆ, 
ಆರು ಜನ ಧಾಂಡಿಗರು........
ಎಂದು ದಾಸರು ಹಾಡಿದ್ದಾರೆ..
ಹೀಗೊಂದು ತರ ಅಂದರೆ,
ಕಾಲೇ ಇಲ್ಲದ ಬಿದಿರಿನ ಮಂಚ,
ತಣ್ಣನೆ ಮಲಗಿದೆ ತಣ್ಣನೆ ದೇಹ,
ಮತ್ತಷ್ಟು ಸುರಿದು ನೀರ
ಹಿಡಿಸಿದರದಕೆ ಗೊತ್ತಾಗದ ಚಳಿಯ,
ಜೀವವಾಗಲೇ ತೊರೆದಿದೆ
ಹುಡುಕುತ್ತಾ ಮುಂದಿನ
ಯೋನಿ ಯಾವುದೆಂದು,
ದೇಹ ಮಲಗಿದ ಕಾಲಿಲ್ಲದ
ಮಂಚವನು ಹೊತ್ತು ನಡೆದರು
ನಾಲ್ಕು ಜನ ಧಾಂಡಿಗರು
ಮಸಣದೆಡೆಗೆ ಉರಿ ಹೊತ್ತಿಸಲೆಂದು,
ಹಿಡಿ ಬೂದಿಯಾಗಿ ಸೇರಿ
ಹೋಯಿತು ಭುವಿಯಲ್ಲಿ ಇನ್ನಿಲ್ಲವೆಂದು,
ಮರೆತೇ ಬಿಟ್ಟರು ಜನ
ಇಂಥವನೊಬ್ಬನಿದ್ದನೆಂಬುದನ್ನೂ.


25.06.2014





















ಪ್ರೀತಿಯ ಮಳೆ 

ಮೇಲೆ ಮಳೆ
ಮಧ್ಯೆ ಛತ್ರಿ
ಛತ್ರಿ ಕೆಳಗೆ
ನಾನೂ ನೀನು
ಜೋಡಿ ಜೋಡಿ.
ನಮ್ಮ ಕೆಳಗೆ
ನೆಲವೆಲ್ಲ 
ನೀರೋ ನೀರು,
ನೀರಲ್ಲೂ ಕಂಡಿತು
ನಮ್ಮದೇ ಜೋಡಿ.

26.06.2014

Sunday, 22 June 2014

ಕನಸುಗಳು.

ಕನಸುಗಳು, ನಿದ್ರೆಯಲ್ಲಿ
ಬೀಳುವ ಕನಸುಗಳಲ್ಲ,
ಹಗಲಲ್ಲೇ ನಾವು ಕಾಣುವ
ಹಗಲುಗನಸುಗಳು.
ನಾವು ಹೀಗಾಗಬೇಕು
ಹಾಗಾಗಬೇಕು, ಇನ್ನೂ
ಎತ್ತರಕ್ಕೆ ಬೆಳೆಯ ಬೇಕು,
ಅದು ಬೇಕು, ಇದು ಬೇಕು,
ನಮ್ಮ ಮಕ್ಕಳು ಬೆಳೆದು
ಮಹಾನ್ ಆಗ ಬೇಕು,
ಈ ಆಸೆಗಳೇ, ನಮ್ಮ
ಈ ಹಗಲು ಕನಸುಗಳು.
ನಿದ್ರೆಯ ಕನಸುಗಳು
ನನಸಾಗಿವುದಿಲ್ಲ.
ಹಗಲುಗನಸುಗಳು
ಅತಿ ಆಸೆಗಳಲ್ಲದಿದ್ದರೆ,
ಯತ್ನಿಸಿದರೆ ನನಸಾಗ ಬಲ್ಲವು


22.06.2014.

Friday, 20 June 2014

ಕೆಂಪು ದೀಪದಡಿ.

ಸಾವಿರಾರು ವಾಹನಗಳು
ದಿನವೂ ಮೇಲೆ ಹರಿದಾಡುವುವು
ಹರದಾರಿ ಹರದಾರಿ
ನಡೆದರೂ ಮುಗಿಯದ ದಾರಿ,
ರೊಜ್ಜು ರಾಡಿ, ಚರಂಡಿ ನೀರು
ಅದಕ್ಕೂ ಕೆಲವೊಮ್ಮೆ ಇದೇ ದಾರಿ
ಗಾಯಗೊಂಡರೂ ಮಲಗಿದೆ
ಮಿಸುಕಾಡದೆ ಶಾಂತಿಯಿಂದ, 
ಸಹನೆಯ ಪ್ರತಿರೂಪ
ಉದ್ದಕ್ಕೂ ಚಾಚಿದ ಈ ರಸ್ತೆ.

19.06.2014
ಹುಟ್ಟಿಗೆ ಮುಹೂರ್ತ.

ಮದುವೆ, ಮುಂಜಿ ಮುಂತಾದ 
ಕಾರ್ಯಗಳನ್ನು ಒಳ್ಳೆಯ ಮುಹೂರ್ತ
ಇಟ್ಟು ಮಾಡುವುದು ಸಾಮಾನ್ಯ.
ಹುಟ್ಟು ಮತ್ತು ಸಾವಿಗೆ ಈವರೆಗೆ
ಮುಹೂರ್ತ ನೋಡುವುದು ಅಸಾಧ್ಯವಿತ್ತು.
ಆದರೆ ಇತ್ತೀಚೆಗೆ ಹುಟ್ಟಿಗೆ ಮುಹೂರ್ತವಿಡುವ
ಪದ್ಧತಿ ಶುರುವಾಗಿದೆ ! ಅಂದರೆ, ದಿನ ತುಂಬಿದ
ಗರ್ಭಿಣಿಗೆ, ಬಿಟ್ಟರೆ ಸಾಮಾನ್ಯ ಹೆರಿಗೆ
ಆಗುವಂತಿದ್ದರೂ, ಒಳ್ಳೆಯ ಮುಹೂರ್ತ
ನೋಡಿ, (ಒಳ್ಳೆಯ ವೇಳೆ,ವಾರ, ನಕ್ಷತ್ರ, ರಾಶಿ ನೋಡಿ)
ಸಿಜೇರಿಯನ್ ಮಾಡಿಸಿ ಹೆರಿಗೆ ಮಾಡಿಸುವ
ಪರಿಪಾಠ ಶುರುವಾಗಿದೆ. ಈ ಬಗ್ಗೆ ಹುಟ್ಟುವ
ಮಗುವಿನ ತಂದೆ ತಾಯಿಯರು
ವೈದ್ಯರ ಮೇಲೆ ಒತ್ತಡ ತರುತ್ತಾರೆ.
ಈ ಒತ್ತಡಕ್ಕೆ ಮಣಿಯದಿದ್ದರೆ ವೈದ್ಯರ
ಉದ್ಯೋಗಕ್ಕೇ ತೊಂದರ ಬರುತ್ತದೆ. !!!!
ಹೇಗಿದೆ ಹೇಳಿ? ಈ ರೀತಿಯ ಬಲವಂತದ
ಹೆರಿಗೆಯಿಂದ ಹುಟ್ಟುವ ಮಗುವಿನ ಜಾತಕ
ಬದಲಾಗುತ್ತದೆ ಎಂಬ ಭ್ರಮೆಗೆ ಏನನ್ನ ಬೇಕು?
ಇದೊಂದು ಮೂಢ ನಂಬಿಕೆಯ ಪರಾಕಾಷ್ಠತೆಗೆ
ಒಳ್ಳೆಯ ಉದಾಹರಣೆ ಎಂದು ನನಗನ್ನಿಸುತ್ತದೆ.
ನಿಮಗೇನು ಅನ್ನಿಸುತ್ತದೆ ಹೇಳಿ?


19.06.2014

Wednesday, 18 June 2014

ದೇವರ ಕಲ್ಲು 

ಊರಲ್ಲಿ ನಮ್ಮ ಮನೆಯ ತೋಟದ 
ಮೂಲೆಯಲ್ಲೊಂದು ದೇವರ ಕಲ್ಲು 
ನೋಡಲು ಮುರಕಲ್ಲಿನ ಹಾಸಿನಂತಿತ್ತು 
ಅದರಲ್ಲಿಯ ದೇವರ ಹೆವರು "ಮುದಿಯ "
ಅದಕ್ಕೊಂದು ಪುಟ್ಟ ಮಾಡೂ ಇದೆ 
ನಾನೂ ನನ್ನಜ್ಜ ದಿನ ಅದಕ್ಕೆ 
ದೀಪ ಹಚ್ಚಿಟ್ಟು ಮಾಡುತ್ತಿದ್ದೆವು ಪೂಜೆ.  
ಅಜ್ಜನ ಮನೆ ಕಾಯುವ ದೈವವೆಂದು 
ಅಜ್ಜನ ವಾದ ವಾಗಿತ್ತು  ....ಅದರೆ
ಆ ದೈವ ಮನೆ ಕಾಯಲಿಲ್ಲ . ಹೆಚ್ಚಿದವು 
ಕಷ್ಟಗಳು, ನಡೆದವು ಅನಾಹುತಗಳು,
ಕಲ್ಲಿನ ದೇವರು ಮೂಲೆಯಲ್ಲೇ ಕೂತಿತ್ತು ಸುಮ್ಮನೆ ,
ಕೊನೆಗೊಂದು ದಿನ ಅಜ್ಜ ಸತ್ತರು,
ಮೂಲೆಯ ಕಲ್ಲಿನ ಪೂಜೆಯೂ ನಿಂತು ಹೋಯಿತು . 
ಈಗ ಮನೆ ನೆಮ್ಮದಿಯಿಂದಿದೆ ...... !!!!!

18.06.2014



Tuesday, 17 June 2014

ಸುಜ್ಞಾನ
ಮಕ್ಕಳನ್ನು 5 ವರ್ಷ ತನಕ
ಪ್ರೀತಿಯಿಂದ ಲಾಲಿಸಿ; ಮತ್ತೆ
10 ವರ್ಷ ಅವರು ತಪ್ಪು ಮಾಡಿದಾಗ 
ನಿಷ್ಟುರವಾಗಿ ಬುದ್ಧಿ ಹೇಳಿ, ಒಮ್ಮೊಮ್ಮೆ
ಪೆಟ್ಟೂ ಹಾಕಿ ತಿದ್ದಿ. 16ನೇ ವರ್ಷ
ಶುರುವಾದಂತೆ ಅವರನ್ನು
ಮಿತ್ರರಂತೆ ಪರಿಗಣಿಸಿ.

......... ಸುಭಾಷಿತ.
ಹೊಸ ಮಳೆ.

ಹೊಸ ಮಳೆ ತುಂತುರು ಹನಿ
ಬಿದ್ದಾಗ ಜುಮ್ಮೆಂದಿತು ಮೈ,
ಪುಳಕಿತಗೊಂಡಿತು ಮನ,
ತಂಗಾಳಿಯ ಓಲೈಕೆಗೆ
ದಣಿವಾರಿಸಿಕೊಂಡಿತು ತನು,
ಹಸಿಯಾದ ಒಣ ಮಣ್ಣಿನ
ವಾಸನೆಯ ಸವಿಯಿತು ನಾಸಿಕ,
ಮುಂಬರುವ ಹಸಿರು ಹಾಸಿಗೆ
ಕಾದು ಕುಳಿತವು ಕಣ್ಣುಗಳು,
ಮನ ತಣಿಯಿತು
ಪ್ರಕೃತಿ ನಲಿಯಿತು,
ಜೀವ ತುಂಬಿದ ಜಗವೆಲ್ಲ
ದೇವ ದೇವ ಎಂದು ನಮಿಸಿತು.


17.06.2014

Sunday, 15 June 2014

ಮುಸುಕು 

ಇಲ್ಲೊಬ್ಬ ತಾನು ಮುಸುಕು ಸರಿಸಿದಾಗಲೇ
ಮುಂಜಾವು ಎನ್ನುತಿದ್ದಾನೆ,
ಅವನಿಗೇನು ಗೊತ್ತು ಸೂರ್ಯ
ಅವನಿಗಿಂತ ಬಹಳ ಮುಂದೋಡಿದ್ದಾನೆ ಎಂದು

20.12.2013
ಎತ್ತರದ ಬೆಟ್ಟ 

ಎತ್ತರದ ಬೆಟ್ಟ
ಅದರ ತುದಿಗೇರುವಾಸೆ ಅವನಿಗೆ
ಅತ್ತ ಇತ್ತ ತಿರುಗಿ ಹುಡುಕಿದನು
ಮೆಟ್ಟಿಲುಗಳನ್ನು
ಸಿಗಲೇ ಇಲ್ಲ ಮೆಟ್ಟಿಲುಗಳು
ಗೊತ್ತೇ ಇಲ್ಲ ಅವನಿಗೆ
ಬೆಟ್ಟ ಹತ್ತಲು ಇರುವ ದಾರಿ
ಏರು ಕೊರಕಲುಗಳದ್ದು ಮಾತ್ರ ಎಂದು.

21.12.2013
ಕಲ್ಪನೆಗಳು 

ಕಲ್ಪನೆಗಳು ಗರಿ ಕೆದರಿದರೆ ಕಾವ್ಯವಾಗುತ್ತಂತೆ,
ಕೆದರಿದ ಗರಿಗಳನ್ನು ಮನದಲ್ಲಿ ಹುಡುಕಿ
ಹೊರಹಾಕುವವರು
ಕವಿಗಳಾಗುತ್ತಾರೆ!

22.12.2013
ಹಿತ್ತಲ ಮಲ್ಲಿಗೆ  

ಹಿತ್ತಲಲ್ಲಿ ಅರಳಿದೆ ಮಲ್ಲಿಗೆ,
ಪಸರಿಸಿದೆ ಕಂಪು ಮನೆಯ ಹೊರ ಒಳಗೆ
ಇನ್ನೂ ತುಂಬಲಿ ಮನ ತುಂಬಾ
ಮನ ಸಹ ಮುದವಾಗಲಿ ಕಂಪಿನಿಂದ

23.12.2013
ಬಾಲ್ಯದ ಒಂದು ನೆನಪು:

ಒಂದು ಸಲ ಹೈಸ್ಕೂಲಿನಲ್ಲಿ ಇರುವಾಗ 'ಭಾರತದ ಸ್ವಾತಂತ್ರ್ಯ ಹೋರಾಟ'
ಎಂಬ ಸ್ಕೂಲ್ ಮ್ಯಾಗಸೀನ್ edit ಮಾಡಲು ಹೇಳಿದರು. ಹುಡುಗರಿಂದ, ಕೆಲವು
ಶಿಕ್ಷಕರಿಂದ ಲೇಖನಗಳನ್ನು ಸಂಪಾದಿಸಿ 200 ಪುಟಗಳ ಕೈ ಬರಹದ ಮ್ಯಾಗಸೀನ್
ತಯಾರು ಮಾಡಿದೆ. ಕೊನೆಯಲ್ಲಿ ಹುಡುಗು ಬುದ್ದಿಯ ಒಂದು ಕುತರ್ಕ ಹೊಳೆಯಿತು.
ಪುಸ್ತಕದ ಕೊನೆಯಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಮಹಾತ್ಮ ಗಾಂಧಿಯವರ ಚಳುವಳಿ ಮಾತ್ರ ಕಾರಣವಲ್ಲ,
ಬ್ರಿಟನ್ ನಲ್ಲಿ ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದದ್ದು ಸಹ ಒಂದು ಮುಖ್ಯವಾದ ಕಾರಣ ಎಂದು
ಒಂದು ಲೇಖನ ಬರೆದು ಸೇರಿಸಿದೆ. ಪುಸ್ತಕಕ್ಕೆ ಬೈಂಡ್ ಕೂಡ ಮಾಡಿಸಿಬಿಟ್ಟೆ. ಆ ಲೇಖನ ನೋಡಿ
ನಮ್ಮ ಇತಿಹಾಸದ ಉಪಾದ್ಯಾಯರಿಗೆ ಬಂತು ನೋಡಿ ಸಿಕ್ಕಾ ಪಟ್ಟೆ ಸಿಟ್ಟು!
ನನ್ನನ್ನು ಕರೆದು ನಾಲ್ಕು ಬಾರಿಸಿ, ನಾನು ಬರೆದ ಕೊನೇ ಲೇಖನವನ್ನು ಪುಸ್ತಕದಿಂದ ಕಿತ್ತು
ಹಾಕಿಸಿ ಪುಸ್ತಕವನ್ನು ರಿಬೈನ್ಡ್ ಮಾಡಿಸಿದರು. (ಆದರೆ, ವಿಚಿತ್ರವೆಂದರೆ ಈಗ ಸಹ ನನಗೆ ನನ್ನ ಆಗಿನ ವಿಚಾರ ಸರಿ ಇತ್ತೇ ಎನಿಸುತ್ತದೆ....!!!)


24.12.2013
ಸಾವು 

ಅಜ್ಜಾ, ಅಜ್ಜಾ,
ರಸ್ತೆಯಲ್ಲಿ ಆಡುತಿದ್ದ ನಾಲ್ಕು ವರ್ಷದ
ನನ್ನ ಸಣ್ಣ ಮೊಮ್ಮಗ ಜೋರಾಗಿ ಕೂಗಿದ.
ಏನಾಯಿತೆಂದು ಹೆದರಿ ಓಡಿ ಹೋದೆ.
ಅಲ್ಲೊಂದು ನಾಯಿ ಸತ್ತು ಬಿದ್ದಿತ್ತು,
ನಾಲ್ಕು ಕಾಗೆಗಳು ಅದನ್ನು ಕುಕ್ಕಿ ಕುಕ್ಕಿ ತಿನ್ನುತಿದ್ದವು.
ಮೊಮ್ಮಗ ಕೇಳಿದ, " ಅಜ್ಜ, ಕಾಗೆಗಳು ಕುಕ್ಕಿದರೂ
ನಾಯಿ ಸುಮ್ಮನೆ ಇದೆಯಲ್ಲ?"
ನಾನಂದೆ,"ಮಗೂ, ನಾಯಿ ಸತ್ತು ಹೋಗಿದೆ, ಅದಕ್ಕೆ..."
"ಹಾಗಂದರೇನು?" ಮೊಮ್ಮಗನ ಪ್ರಶ್ನೆ.
ಏನು ಹೇಳಲಿ ಉತ್ತರ, ತಲೆ ಕೆರೆದು ಕೊಂಡೆ.
"ಅದನ್ನೆಲ್ಲ ನೋಡಬಾರದು ಕೊಳಕು, ಬಾ ಮಗು"
ಎಂದು ಅವನನ್ನು ಒಳಗೆ ಕರೆದು ತಂದೆ.
ಎಲ್ಲವನ್ನೂ ಎಲ್ಲರಿಗೂ ತಿಳಿಸಿ ಹೇಳಲು ಆಗುವುದಿಲ್ಲ ಅಂದು ಕೊಂಡೆ
ಅಲ್ಲದೆ ಸಾಯುವುದು ಎಂದರೆ ಏನು, ನನಗೇ ಗೊತ್ತಿಲ್ಲ.


26.12.2013
ತೊಳಲಾಟ 

ನದಿಯ ಮಧ್ಯದಲ್ಲಿ
ಹರಿಗೋಲಿನಲ್ಲಿ ನಾನು
ಅಂಬಿಗನೆಲ್ಲಿ ಹೋದನೋ ತಿಳಿಯದು
ಆ ದಡಕ್ಕೋ ಈ ದಡಕ್ಕೋ
ತಿಳಿಯದ ತೊಳಲಾಟ 
ಗಾಳಿ ಬೀಸಿದತ್ತ ಸಾಗಲೇ,
ಹುಟ್ಟಾಡಿಸಿ ಅಂಚಿಗೆ
ಸರಿಯಲು ನೋಡಲೇ
ಮಸುಕಾಗಿದೆ ಅರಿವು
ಮುದುರಿ ಹೋಗಿದೆ ಮನಸ್ಸು

15.01.2014.
ಚೆದುರಿದ ಭಾವನೆಗಳು 

ಬರೆದು ಬರೆದು ಸುಸ್ತಾದೆ
ಕಸದ ಬುಟ್ಟಿ ತುಂಬಿತು
ಕಸಿವಿಸಿಯಿಂದ ಮುದುಡಿ
ಎಸೆದ ಹಾಳೆಗಳಿಂದ
ಆದರೆ ತುಂಬಲಿಲ್ಲ 
ಮನಸ್ಸಿನ ಬುಟ್ಟಿ
ಎಲ್ಲೆಲ್ಲೋ ಚೆದುರಿದ 
ಒಂದಾಗದ ಭಾವನೆಗಳಿಂದ.

18.01.2014
ಅಭ್ಯಾಸ ಬಲ 

ಎಂದೋ ಓದಿದ ಒಂದು ಜೋಕ್. ಒಬ್ಬ ಬಸ್ ಕಂಡಕ್ಟರ್ ಬಹಳ ವರ್ಷ ಕೆಲಸ ಮಾಡಿ ರೆಟೈರ್ ಆದನಂತೆ. ಕೆಲ ದಿನಗಳ ನಂತರ ಅವನ ಮೊಮ್ಮಗ ಮನೆಯಲ್ಲಿ ಏನೋ ಬರೆದು ಕೊಡೆಂದು ಗಂಟು ಬಿದ್ದನಂತೆ. ಆಗ ಆತ ಮನೆಯಲ್ಲಿದ್ದ ಜೋಕಾಲಿಯಿ ಮೇಲೆ ಕೂತು ತೂಗಿ ಕೊಳ್ಳುತ್ತಾ ಬರೆಯಲಾರಂಭಿಸಿದನು. ಆಗ ಹೆಂಡತಿ ಕೇಳಿದಳು ಹೀಗೇಕೆ ಮಾಡುತ್ತೀರಿ, ಆರಾಮವಾಗಿ ಕುರ್ಚಿ table ಮೇಲೆ ಕೂತು ಬರೆಯ ಬಾರದೆ?. ಇದಕ್ಕೆ, ಅವನ ಉತ್ತರ "ನನಗೆ ಸರ್ವಿಸ್ ಪೂರ್ತಿ ಕುಲುಕಾಡುವ ಬಸ್ಸಿನಲ್ಲಿ ಬರೆದು ಬರೆದು, ಕುರ್ಚಿಯಲ್ಲಿ ಕೂತು ಬರೆಯುವ ಅಭ್ಯಾಸವೇ ತಪ್ಪಿ ಹೋಗಿದೆ. ಅದಕ್ಕೇ ಹೀಗೆ" ----ಹೀಗೆ ಒಟ್ಟಿನಲ್ಲಿ ಎಲ್ಲ ಅಭ್ಯಾಸ ಬಲ.

19.01.2014
ಪ್ರೀತಿ - ವಿಶ್ವಾಸ 

ಪ್ರೀತಿ ವಿಶ್ವಾಸ ಬೆಳೆಯಲು
ಹಿಂದಿನ ಕಹಿ ನೆನಪುಗಳನ್ನು
ಮರೆಯ ಬೇಕು
ಪೂರ್ವ ದ್ವೇಷ ಬಿಡಬೇಕು
ಭಾವನೆಗಳು ವಿಶಾಲವಾಗಬೇಕು
ಎಲ್ಲರೂ ನನ್ನವರೇ, ನನ್ನವರೇ
ಅನ್ನಬೇಕು.
ನಿಮಗಾಗಿ ನಾವು, ನಮಗಾಗಿ ನೀವು
ಎಂದಂದು ಕೊಂಡರೆ
ಬಾಳು ಬಲು ಸುಂದರ.

23.01.2014


ಕೈ ಕೊಟ್ಟಳು 

ಅಂದು ನೀನಿಲ್ಲದೆ
ನಾನು ಬದುಕಿರಲಾರೆ ಎಂದವಳು
ಇಂದು ನಾ ಹೊರಟಾಗ
ನನ್ನ ಕಾಲ ಇನ್ನೂ ಬಂದಿಲ್ಲ
ನೀ ಮುಂದೆ ಹೋಗು
ನಾನು ಹಿಂದಿನಿಂದ ಬರುವೆ
ಅನ್ನುತಿದ್ದಾಳಲ್ಲ.

24.01.2014
ಕೋಪದಿಂದ ದೂರವಿರಿ
============

ಕೋಪದಿಂದ ಗಾವುದ ದೂರವಿರಿ
ಅದು ನಿಮ್ಮೊಳಗೇ ಹುಟ್ಟಿ
ಮೊದಲು ನಿಮ್ಮನ್ನೇ ಸುಡುವ ಬೆಂಕಿ.
ಕೋಪಾಗ್ನಿಗೆ ಮೊದಲ ಆಹುತಿ ನೀವೇ.
ಇದು ವೈದ್ಯಕೀಯವಾಗಿಯೂ ಸತ್ಯ.
ಕೋಪ ಮಾಡಿಕೊಳ್ಳುತ್ತಲೇ ಇದ್ದರೆ 
ದಿನ ದಿನಕ್ಕೆ ನಿಮ್ಮ ಆರೋಗ್ಯವೇ ಕ್ಷೀಣಿಸುತ್ತಾ ಹೋಗುತ್ತದೆ.

ಕೋಪವೇಕೆ? ಕೋಪ ಮಹಾ ಕೆಟ್ಟದು. ಯಾವಾಗ/ಯಾಕೆ ಕೋಪ ಮಾಡಿಕೊಳ್ಳಬೇಕು ಎಂದು ಚಿಂತಿಸಿ.
ನೀವು ಎಲ್ಲ ವಿಧದಲ್ಲೂ ಸರಿ ಇದ್ದರೆ ಕೋಪ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
ಒಂದೊಮ್ಮೆ ನಿಮ್ಮ ನಿಲುವು ತಪ್ಪಾಗಿದ್ದರೆ ಕೋಪಿಸಿಕೊಳ್ಳುವ ಯಾವ ಅರ್ಹತೆಯೂ ನಿಮಗಿಲ್ಲ.
ಅಲ್ಲದೆ ನೀವು ಕೋಪಿಸಿಕೊಂಡು ಕೊಡುವ ಆಜ್ಞೆಗಳಿಗೆ ಬಗ್ಗದವರು (ಮಕ್ಕಳೂ ಸಹ),
ನೀವು ತಾಳ್ಮೆಯಿಂದ ಕೊಡುವ ಸಲಹೆ, ತಿಳುವಳಿಕೆಗೆ ಹೆಚ್ಚಾಗಿ ಮಣಿಯುತ್ತಾರೆ.
ಅಂದಮೇಲೆ ಕೋಪಿಸಿಕೊಳ್ಳುವುದೇಕೆ? (ಸಂಗ್ರಹ)


26.01.2014
ಅಂತರಂಗ - ಬಹಿರಂಗ 

ಬಾಹ್ಯ ಸೌಂದರ್ಯಕ್ಕಿಂತ
ಹೃದಯ ಸೌಂದರ್ಯ ದೊಡ್ಡದು
ಎನ್ನುವುದು ಬಲ್ಲಿದರ ನುಡಿ.
ಆದರೆ ಬಾಹ್ಯ ಸೌಂದರ್ಯ
ಬರೆ ಕಣ್ಣಿಗೆ ಕಾಣುತ್ತದೆ,
ಹೃದಯ ಸೌಂದರ್ಯ 
ಬರೆ ಕಣ್ಣಿಗೆ ಕಾಣದು.
ವ್ಯಕ್ತಿಯ ಒಳ ಸೌಂದರ್ಯವನ್ನು
ಅರಿಯುವ ಬಗೆ ಹೇಗೆ?

28.01.2014
ಸ೦ಸಾರ
-----------
ಸ೦ಸಾರದಲ್ಲಿ,
ಹೆ೦ಡತಿ-ಆಡಳಿತಪಕ್ಷ.
ಅಪ್ಪ ಅಮ್ಮ-ವಿರೋಧಪಕ್ಷ
(ಕೆಲವೊಮ್ಮೆ ಅದಲುಬದಲು ಆಗಲೂಬಹುದು)
ಪತಿ !!
ಬರಿದೇ ರಾಷ್ಟ್ರಪತಿ.

29.01.2014
ಅಸೆ ನಿರಂತರ 

ಮುಂಜಾವಿನ ಹೊಂಗಿರಣದಲ್ಲಿ
ಅರಳಿದ ಆಸೆ
ಮಧ್ಯಾನ್ಹದ ಉರಿಯಲ್ಲಿ
ಬಸವಳಿದು ಕಮರಿ ಮುದುರಿತು
ಮತ್ತೆ ಸಂಜೆಯ ತಂಬೆಳಕಿನಲಿ
ಮತ್ತೆ ಚೇತರಿಸಿ
ನಾಳಿನ ಉಷೆಯ 
ದಾರಿ ಕಾಯುವೆನೆಂದಿತು.

30.01.2014
ಕೋಳಿಯ ಬೆಳಗು 

ಅವತ್ತು ಕೋಳೀಗೇನೋ
ಸಿಟ್ಟು ಬಂದು ಬಿಟ್ಟಿತ್ತು
ಇವತ್ತು ನಾನು ಕೂಗೋದೇ
ಇಲ್ಲ ಅದ್ಹೇಗೆ ಬೆಳಗಾಗುತ್ತೋ
ನೋಡೋಣ ಎಂದು
ಮುಸುಕು ಹಾಕಿ ಮಲಗೇ ಬಿಡ್ತು.
ಅದು ಕಣ್ಣು ಹೊಸಕಿಕೊಂಡು
ಎದ್ದಾಗ, ಬೆಳಗಾಗಿಯೇ ಹೋಗಿತ್ತು.
ಸೂರ್ಯ ಮಾರು ಮೇಲೆ 
ಬಂದು ಬಿಟ್ಟಿದ್ದ.
ಕೋಳಿಯ ಜುಟ್ಟು
ನೆಲಕ್ಕೆ ಬಾಗಿತ್ತು.

06.02.2014
ಪ್ರೀತಿ ಇಲ್ಲದ ಸೇವೆ 

ಪ್ರೀತಿ ಪ್ರೇಮವಿಲ್ಲದ
ಸ್ವಾರ್ಥ ತುಂಬಿದ
ಅಹಂಕಾರದ ಸೇವೆ
ಸಾಯಲಿಕ್ಕೆ ಬಿದ್ದವನಿಗೂ
ಬೇಡ ಎನಿಸುತ್ತದೆ.
ಅಂಥ ಸೇವೆಗೆ
ಬೀಳುವುದಕ್ಕಿಂತ
ಒಮ್ಮೆಲೇ
ಬೀದಿ ಹೆಣವಾಗುವುದು ಲೇಸು
ಎಂದು ನೊಂದ
ಜೀವ ಮರುಗುತ್ತದೆ.

06.02.2014

ಭಾಷಾ ಗೊಂದಲ 

ಮಂಗಳೂರಿನ ಕಡೆ ಒಂದು ಸ್ಠಳದಲ್ಲಿ ಗಾಯನ ನಡೆಯುತ್ತಿತ್ತಂತೆ. ಒಬ್ಬ ಪ್ರೇಕ್ಷಕ ಕದ್ದು ಮುಚ್ಚಿ ಎಣ್ಣೆ ಹೊಡೆದು ಮುಂದಿನ ಸಾಲಲ್ಲಿ ಕೂತಿದ್ದನಂತೆ. ಸಂಗೀತಗಾರರು ಹಾಡಲು ಶುರುಮಾಡಿದರು..
ಈ ಪರಿಯ ... ಈ ಪರಿಯ...
ಹಾಡುವಾಗ ಸಂಗೀತಗಾರನ ಕೈ ಇವನತ್ತ ತೋರಿಸುತ್ತಿದ್ದರು
ಇವನಿಗೆ ಇದ್ದಕಿದ್ದಂತೆ ಕೋಪ ಬಂದು ’ಹೌದು ನಾನು ಕುಡಿದಿದ್ದೇನೆ, ನನ್ನ ದುಡ್ಡು ನನ್ನ ಇಷ್ಟ ನೀನ್ಯಾವನು ಹೇಳುವುದಕ್ಕೆ’ ಅಂತ ತುಳು ಭಾಷೆಯಲ್ಲಿ ಎಗರಾಡಿದನಂತೆ....
(ಅಂದ ಹಾಗೆ ’ಈ ಪರಿಯ’ ಅಂದರೆ ತುಳು ಭಾಷೆಯಲ್ಲಿ ’ನೀನು ಕುಡಿದಿರುವೆ’ ಎನ್ನುವ ಅರ್ಥ )

11.02.2014
ಸೌಂದರ್ಯ 

ಸೌಂದರ್ಯವೆಲ್ಲಿದೆ,
ಕಣ್ಣು, ಕಿವಿ,
ನಾಸಿಕದಲ್ಲೇ?
ಗದ್ದ, ಗಲ್ಲ, ತುಟಿಗಳಲ್ಲೇ?
ಇಲ್ಲಾ ಮಾಡಿಕೊಂಡ
ಶೃಂಗಾರದಲ್ಲೇ?
ಅಥವಾ ತೋರುವ
ಒನಪು ವಯ್ಯಾರದಲ್ಲೇ?
ಅಲ್ಲ, ಇದಾವುದೂ ಅಲ್ಲ,
ಸೌಂದರ್ಯವಿದೆ
ನವಿರಾದ ನಡೆ ನುಡಿಯಲ್ಲಿ,
ಹೃದಯದಲ್ಲಿ ತುಂಬಿದ
ಮಧುರ ಭಾವನೆಗಳಲ್ಲಿ,
ಎಲ್ಲರೂ ಮೆಚ್ಚುವ ಸನ್ನಡತೆಯಲ್ಲಿ,
ಎಲ್ಲರಿಗೆ ಬೀರುವ ಸೌಜನ್ಯದಲ್ಲಿ,
ಭಾವನೆಗಳ ಸದ್ಭಾವ
ಸಂಗಮದಲ್ಲಿ, ಹೀಗೆ
ಇಹ ಪರದ ಒಳಿತು
ಚಿಂತನೆಯಲ್ಲಿದೆ ಸೌಂದರ್ಯ.


11.02.2014