Thursday, 12 June 2014

ಭೀತಿಯ ಬಗ್ಗೆ ಎಲ್ಲೋ ಕೇಳಿದ ಕತೆ.
***************************


ಒಂದೂರು. ಆ ಊರಲ್ಲಿ ಒಂದು ಪಾಳು ಬಿದ್ದ ಮನೆ
ಇತ್ತು. ಆ ಮನೆಯಲ್ಲಿ ದೆವ್ವ ವಾಸವಾಗಿದೆ ಎಂದು ಊರಿನ ಜನ ನಂಬಿಕೊಂಡಿದ್ದರು. ಹಗಲು ಹೊತ್ತಿನಲ್ಲಿ ಸಹ ಜನರು ಆ ಮನೆಯ ಕಡೆ ಹಾಯುತ್ತಿರಲಿಲ್ಲ.
ಇನ್ನು ರಾತ್ರಿಯಂತೂ ಕೇಳುವುದೇ ಬೇಡ.

ಆ ಊರಲ್ಲಿ ಐದು ಜನ ತರುಣರ ಗುಂಪೊಂದು ಇತ್ತು.
ಅವರು ತಾವು ದೆವ್ವ ಭೂತ ಎಲ್ಲ ನಂಬುವುದಿಲ್ಲ
ಎಂದು ಕೊಂಡು ಅಡ್ಡಾಡುತ್ತಿದ್ದರು. ಊರಿನ ಕಿಡಗೇಡಿಯೊಬ್ಬ ಈ ಐವರಿಗೆ ಒಂದು ಸವಾಲೊಡ್ಡಿದ.
ಅದೇನಂದರೆ, ಈ ಐದು ಜನರು ಒಂದು ರಾತ್ರಿ ೧೨ ಗಂಟೆಗೆ ಆ ಮನೆಯೊಳಗೆ ಹೋಗಿ ಮನೆಯ ಹಜಾರದಲ್ಲಿ ನೆಲಕ್ಕೆ ಒಂದೊಂದು ಮೊಳೆ ಹೊಡೆದು
ಹಿಂದೆ ತಿರುಗಿ ನೋಡದೆ ವಾಪಾಸು ಬರಬೇಕು, ಎಂದು.

ಆ ಐದೂ ಜನರೂ ಉಡಾಫೆಯಿಂದ ಈ ಪಂಥಕ್ಕೆ ಒಪ್ಪಿ ಕೊಂಡರು. ಅದೇ ದಿನ ರಾತ್ರಿ ಪ್ರತಿಯೊಬ್ಬನೂ ಕೈಯಲ್ಲಿ ಒಂದೊಂದು ದೊಡ್ಡ ಮೊಳೆ ಮತ್ತು ಸುತ್ತಿಗೆ ಹಿಡಿದುಕೊಂಡು ರಾತ್ರಿ ೧೨ ಗಂಟೆಗೆ ಆ ಮನೆಯನ್ನು ಹೊಕ್ಕರು. ಕಗ್ಗತ್ತಲು. ಜೀರುಂಡೆಗಳು ಚೀರುವ ಶಬ್ದ. ಬಾವಲಿಗಳ ಹಾರಾಟದ ಪಟ ಪಟ ಶಬ್ದ. ಒಟ್ಟಾರೆ ಯಾರಿಗೂ ಭಯ ಹುಟ್ಟಿಸುವ ವಾತಾವರಣ. ಆ ಐವರಲ್ಲಿ ನಾಲ್ಕು ಮಂದಿ ಮನೆಯ ಬಾಗಿಲ
ವರಗೆ ಹೋದವರು ಹೆದರಿ ಒಳಗೆ ಹೋಗಲಿಲ್ಲ.

ಆದರೆ, ಒಬ್ಬ ಮಾತ್ರ ಧೈರ್ಯಮಾಡಿ ಒಳಗೆ ಹಜಾರದ ವರಗೆ ಹೋಗಿ ಬಗ್ಗಿ ಕುಳಿತು ನೆಲಕ್ಕೆ ಮೊಳೆ ಹೊಡೆದೇ ಬಿಟ್ಟ. ಗೆದ್ದೆ ಎಂದುಕೊಂಡು ಹಿಂತುರುಗಿ ಹೊರಟವ ಜೋರಾಗಿ ಕಿಟಾರನೆ ಕಿರುಚಿದ. ಬಾಗಿಲಲ್ಲಿ ನಿಂತಿದ್ದ ನಾಲ್ವರು ಹೆದರಿ ಅಲ್ಲಿಂದ ಓಟ ಕಿತ್ತರು.

ಮರು ದಿನ ಮುಂಜಾನೆ ರಾತ್ರಿ ಓಡಿ ಬಂದವರು ಊರಲ್ಲಿ ಸುದ್ದಿ ಮಾಡಿದರು. ಊರಿನ ಹತ್ತು ಮಂದಿ ಆ ಮನೆಯೊಳಗೆ ಹೋಗಿ ನೋಡಿದಾಗ ಕಂಡದ್ದೇನು? ಮೊಳೆ ಹೊಡೆದಾತ ಅಲ್ಲಿ ರಕ್ತ ಕಾರಿ ಸತ್ತು ಬಿದ್ದಿದ್ದ. ಹತ್ತಿರ ಹೋಗಿ ನೋಡಿದಾಗ ಗೊತ್ತಾಯ್ತು, ಆತ ಕತ್ತಲೆಯಲ್ಲಿ ಕುಳಿತು ಮೊಳೆ ಹೊಡೆಯುವಾಗ ತಾನುಟ್ಟ ಪಂಚೆ ತುದಿಯನ್ನು ಸೇರಿಸಿ ಮೊಳೆ ಹೊಡೆದಿದ್ದ. ಹಿಂತಿರುಗಿ ಹೊರಟಾಗ ಸಹಜವಾಗಿಯೇ ಎಳೆದಂತಾಗಿತ್ತು. ತನ್ನನ್ನು ದೆವ್ವವೇ ಎಳೆಯುತ್ತಿದೆ ಎಂದು ಹೆದರಿ ಎದೆ ಒಡೆದು ಬಿದ್ದು ಸತ್ತು ಹೋಗಿದ್ದ.

ಹೀಗೆ, ಎಷ್ಟೇ ಧೈರ್ಯಶಾಲಿಯಾದರೂ ಒಮ್ಮೊಮ್ಮೆ ಮನದ ಮೂಲೆಯಲ್ಲಿ ಅಡಗಿರುವ ಭೀತಿಗೆ ವಿವೇಕಶೂನ್ಯನಾಗಿ ಬಲಿಯಾಗುತ್ತಾನೆ.


೧೩. ೦೪. ೨೦೧೪

No comments:

Post a Comment